ಹೊಸದಿಗಂತ ವರದಿ ಮಡಿಕೇರಿ:
ಲವ್ ಜಿಹಾದ್ ಹಾಗೂ ಬಲವಂತದ ಮತಾಂತರವನ್ನು ವಿರೋಧಿಸಿ ಹಿಂದು ಸುರಕ್ಷಾ ಸಮಿತಿ ಕರೆ ನೀಡಿದ್ದ ಸ್ವಯಂಪ್ರೇರಿತ ಕುಶಾಲನಗರ ಬಂದ್ ಹಾಗೂ ಬೃಹತ್ ಜನಾಂದೋಲನ ಜಾಗೃತಿ ಜಾಥಾ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಮಂಗಳವಾರ ಪೂರ್ವಾಹ್ನ ಕಾವೇರಿ ನಿಸರ್ಗಧಾಮದಿಂದ ಅರಂಭವಾದ ಜಾಥಾದಲ್ಲಿ ಮಹಿಳೆಯರಾದಿಯಾಗಿ ಸಹಸ್ರಾರು ಸಂಖ್ಯೆಯ ಹಿಂದು ಬಾಂಧವರು ಕೇಸರಿ ಧ್ವಜಗಳನ್ನು ಹಿಡಿದು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು.
ನಿಸರ್ಗಧಾಮದಿಂದ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಕುಶಾಲನಗರದ ಗಣಪತಿ ದೇವಸ್ಥಾನದವರೆಗೆ ಶಿಸ್ತುಬದ್ಧವಾಗಿ ಸಾಗಿದ ಜಾಥಾ, ಇಲ್ಲಿನ ಕಾರು ನಿಲ್ದಾಣದಲ್ಲಿ ಸಮಾವೇಶಗೊಂಡಿತು.
ಹಿಂದೂ ಜಾಗರಣ ವೇದಿಕೆ, ಬಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳು ಹಾಗೂ 20ಕ್ಕೂ ಅಧಿಕ ವಿವಿಧ ಸಮಾಜಗಳ ಪ್ರತಿನಿಧಿಗಳು, ಕಾರ್ಯಕರ್ತರು, ಮಹಿಳೆಯರು, ಯುವಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಸ್ವಯಂಪ್ರೇರಿತ ಬಂದ್:
ಮಂಗಳವಾರ ಕುಶಾಲನಗರದ ಸಂತೆ ದಿನವಾಗಿದ್ದರೂ, ಹಿಂದೂ ಧರ್ಮದ ಅಸ್ಮಿತೆಯನ್ನು ಉಳಿಸುವ ಹೋರಾಟಕ್ಕೆ ಕುಶಾಲನಗರ ಪಟ್ಟಣದ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತಮ್ಮ ಬೆಂಬಲ ಸೂಚಿಸಿದರು.
ಕುಶಾಲನಗರ ಪಟ್ಟಣದ ಮುಖ್ಯರಸ್ತೆ, ಐ.ಬಿ.ಸರ್ಕಲ್, ಬಸ್ ನಿಲ್ದಾಣ ರಸ್ತೆ, ಮಾತ್ರವಲ್ಲದೆ ನಿಸರ್ಗಧಾಮದ ಎನ್.ಟಿ.ಸಿ ವಾಣಿಜ್ಯ ಸಂಕೀರ್ಣ ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಹೋಟೆಲ್, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯುವೆಲ್ಲರಿ, ವಾಹನ ಶೋರೂಂಗಳು ಸಂಪೂರ್ಣ ಮುಚ್ಚಿದ್ದವು.
ಇದನ್ನೂ ಓದಿ:
ವಿಶೇಷವೆಂದರೆ ಇದು ಯಾವುದೇ ಬಲವಂತದ ಬಂದ್ ಆಗಿರಲಿಲ್ಲ. ಸಮುದಾಯದ ಹಿತದೃಷ್ಟಿಯಿಂದ ವರ್ತಕರೆಲ್ಲರೂ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಜಾಥಾಕ್ಕೆ ಬೆಂಬಲ ಸೂಚಿಸಿದರು.
‘ಧಾರ್ಮಿಕ ಅಸ್ಮಿತೆ ಉಳಿಸುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದ್ದರಿಂದ ಇಂದು ಸ್ವಯಂ ಪ್ರೇರಣೆಯಿಂದ ವ್ಯಾಪಾರ ಬಂದ್ ಮಾಡಿದ್ದೇವೆ’ ಎಂದು ವರ್ತಕರ ಸಂಘದ ಪ್ರಮುಖರು ತಿಳಿಸಿದರು.
ಅಕ್ರಮ ಮತಾಂತರವನ್ನು ಖಂಡಿಸಿ, ಹಿಂದು ಸಮಾಜವನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಶಾಂತಿಯುತ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಜನಾಂದೋಲನ ಸಮಿತಿಯ ಪ್ರಮುಖರು ತಿಳಿಸಿದರು.
ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಹಿಂದೂ ಸುರಕ್ಷಾ ಸಮಿತಿಯ ಮುಖಂಡ ಅಮೃತ್ ರಾಜ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜನಾಂದೋಲನ ಜಾಥಾದ ಹಿನ್ನೆಲೆಯಲ್ಲಿ ಕುಶಾಲನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.



