June 30, 2026
Tuesday, June 30, 2026
spot_img

ಒಣಗುತ್ತಿದ್ದ ಮುಂಗಾರು ಬೆಳೆಗೆ ಮರುಜೀವ: ಆದರೆ ಬೆಳಗಾವಿ ರೈತರಿಗೆ ತಪ್ಪದ ಕೀಟಬಾಧೆ ಸಂಕಷ್ಟ

ಹೊಸದಿಗಂತ ವರದಿ ಬೆಳಗಾವಿ:

ಮುಂಗಾರು ಮಳೆಯ ಆರಂಭಿಕ ಆರ್ಭಟಕ್ಕೆ ಹರ್ಷಗೊಂಡು ಸಡಗರದಿಂದ ಬಿತ್ತನೆ ಕಾರ್ಯ ಮುಗಿಸಿದ್ದ ಜಿಲ್ಲೆಯ ರೈತಾಪಿ ವರ್ಗಕ್ಕೆ, ಪ್ರಕೃತಿ ಮತ್ತು ಕೀಟಗಳು ಒಟ್ಟೊಟ್ಟಿಗೆ ಪರೀಕ್ಷೆ ಇಡುತ್ತಿವೆ. ಬಿತ್ತನೆಯಾದ ಬಳಿಕ ಸುದೀರ್ಘ 15 ದಿನಗಳ ಕಾಲ ಮಳೆ ಕಣ್ಣಾಮುಚ್ಚಾಲೆ ಆಡಿದ್ದರಿಂದ ಒಣಗುವ ಹಂತ ತಲುಪಿದ್ದ ಮುಂಗಾರು ಬೆಳೆಗಳಿಗೆ ಭಾನುವಾರ ಸುರಿದ ಮಳೆ ಮರುಜೀವ ನೀಡಿದೆಯಾದರೂ, ಅದರ ಬೆನ್ನಲ್ಲೇ ಕೀಟಬಾಧೆಯ ಹೊಸ ಆತಂಕ ಎದುರಾಗಿದೆ.

ಮಳೆರಾಯನ ಕೃಪೆಯಿಂದ ಚಿಗುರಿದ ಆಸೆ:

ಜಿಲ್ಲೆಯಲ್ಲಿ ಮುಂಗಾರು ಮಳೆ ಸಕಾಲಕ್ಕೆ ಆರಂಭವಾಗಿದ್ದರಿಂದ ರೈತರು ಅತ್ಯಂತ ಉತ್ಸಾಹದಿಂದ ಬಿತ್ತನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಜಿಲ್ಲೆಯ ಪ್ರಮುಖ ಬೆಳೆಗಳಾದ ಸೋಯಾಬಿನ್, ಹತ್ತಿ, ಕಡಲೆ ಸೇರಿದಂತೆ ಇತ್ಯಾದಿ ಮುಂಗಾರು ಬೆಳೆಗಳ ಬಿತ್ತನೆಯನ್ನೂ ಮುಗಿಸಿದ್ದರು. ಆದರೆ ಬಿತ್ತನೆಯಾದ ನಂತರ ಸರಿ ಸುಮಾರು 15 ದಿನಗಳ ಕಾಲ ಮಳೆಯೇ ಬಾರದೆ ರೈತರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿತ್ತು. ತೀವ್ರ ಬಿಸಿಲಿನ ತಾಪಮಾನಕ್ಕೆ ಸಿಲುಕಿ ಬೆಳೆಗಳು ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ತಲುಪಿದ್ದವು.

“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎನ್ನುವಷ್ಟರಲ್ಲಿ, ಭಾನುವಾರ ಮಧ್ಯಾಹ್ನದಿಂದ ಜಿಲ್ಲೆಯಾದ್ಯಂತ ವರುಣದೇವ ಕೃಪೆ ತೋರಿದ್ದಾನೆ. ಉತ್ತಮ ಮಳೆಯಾಗಿದ್ದರಿಂದ ಒಣಗುತ್ತಿದ್ದ ಬೆಳೆಗಳು ಮತ್ತೆ ಹಸಿರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈಗ ಕೀಟಬಾಧೆಯ ಹೊಸ ಸುಳಿ!:

ಒಂದು ಸಂಕಷ್ಟ ಮುಗಿಯಿತು ಎನ್ನುವಷ್ಟರಲ್ಲೇ ರೈತರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ. ಬಿತ್ತನೆ ಮಾಡಿ ಹದಿನೈದು ದಿನಗಳ ಕಾಲ ಮಳೆ ಇಲ್ಲದೆ, ಈಗ ತಡವಾಗಿ ಮಳೆಯಾಗಿರುವುದರಿಂದ ಬೆಳೆಗಳಿಗೆ ತೀವ್ರ ಸ್ವರೂಪದ ಕೀಟಬಾಧೆ (ರೋಗಬಾಧೆ) ಪ್ರಾರಂಭವಾಗಿದೆ. ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದ್ದು, ರೈತಾಪಿ ವರ್ಗ ಮತ್ತೊಮ್ಮೆ ತೀವ್ರ ಆತಂಕಕ್ಕೆ ಸಿಲುಕಿದೆ.

ಇದನ್ನೂ ಓದಿ:

ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ರೈತರ ಆಗ್ರಹ:

ಪ್ರಸಕ್ತ ಸಾಲಿನಲ್ಲಿ ಬೆಳೆಗಳನ್ನು ಕೀಟಬಾಧೆಯಿಂದ ರಕ್ಷಿಸಿಕೊಳ್ಳಲು ರೈತರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಜಂಟಿ ತುರ್ತು ಸಭೆ ನಡೆಸಬೇಕು. ತಜ್ಞರಿಂದ ಬಾಧಿತ ಪ್ರದೇಶಗಳ ಪರಿಶೀಲನೆ ನಡೆಸಬೇಕು. ಕೀಟಬಾಧೆ ತಡೆಗಟ್ಟಲು ಅಗತ್ಯವಿರುವ ಗುಣಮಟ್ಟದ ಕೀಟನಾಶಕ ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ತಲುಪಿಸಲು ತಕ್ಷಣದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲೆಯ ರೈತ ಮುಖಂಡರು ಹಾಗೂ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬೆಳಗಾವಿ ಜಿಲ್ಲೆಯ ರೈತರ ಬದುಕಿನಲ್ಲಿ ಒಂದಾದ ಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಹವಾಮಾನ ವೈಪರೀತ್ಯದ ನಡುವೆಯೂ ಬ್ಯಾಂಕುಗಳಲ್ಲಿ, ಕೈಗಡ ಸಾಲ ಸೂಲ ಮಾಡಿ, ಬಿತ್ತನೆ ಬೀಜ, ಗೊಬ್ಬರ ತಂದು ಕೃಷಿ ಚಟುವಟಿಕೆಗಳಲ್ಲಿ ಹಗಲಿರುಳು ಶ್ರಮ ವಹಿಸಿದ್ದಾರೆ. ಸದ್ಯಕ್ಕೆ ಮಳೆಯೇನೋ ಕೈ ಹಿಡಿದಿದೆ, ಆದರೆ ಕೀಟಬಾಧೆಯನ್ನು ಮೆಟ್ಟಿ ನಿಂತು ಈ ಬಾರಿ ಬೆಳೆಗಳು ರೈತರ ಕೈ ಹಿಡಿಯುತ್ತವೆಯೇ ಅಥವಾ ಇಷ್ಟೆಲ್ಲಾ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !