August 25, 2026
Tuesday, August 25, 2026
spot_img

ಒಂದು ಸಣ್ಣ ನಿರ್ಲಕ್ಷ್ಯ, ಪ್ರಾಣಕ್ಕೇ ಕಂಟಕ: ಬಸ್-ಟಿಪ್ಪರ್ ನಡುವೆ ಸಿಲುಕಿ ಪ್ರಯಾಣಿಕನ ಶಿರಚ್ಛೇದ

ಹೊಸದಿಗಂತ ಕುಂದಗೋಳ:

ಹುಬ್ಬಳ್ಳಿ-ಕುಂದಗೋಳ ಮುಖ್ಯ ರಸ್ತೆಯಲ್ಲಿ ಬುಧವಾರ ಸಂಜೆ ರಕ್ಕಸ ವೇಗಕ್ಕೆ ಮತ್ತೊಂದು ಬಲಿಯಾಗಿದೆ. ಚಲಿಸುತ್ತಿದ್ದ ಖಾಸಗಿ ಬಸ್‌ನ ಕಿಟಕಿಯಿಂದ ತಲೆ ಹೊರಹಾಕಿದ ಪ್ರಯಾಣಿಕನೊಬ್ಬನಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ, ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ಘಟನೆಯ ಹಿನ್ನೆಲೆ ಏನು?

ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರದ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್‌ನಲ್ಲಿ ಈ ದುರಂತ ಸಂಭವಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಗುಟ್ಕಾ ಅಥವಾ ಜಗಿದ ವಸ್ತುವನ್ನು ಉಗುಳಲು ಕಿಟಕಿಯಿಂದ ತಲೆಯನ್ನು ಹೊರಗಡೆ ಹಾಕಿದ್ದಾರೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಟಿಪ್ಪರ್ ವಾಹನವು ಬಸ್‌ಗೆ ತೀರಾ ಹತ್ತಿರವಾಗಿ ಹಾದುಹೋಗಿದೆ. ಈ ಸಂದರ್ಭದಲ್ಲಿ ಟಿಪ್ಪರ್ ನೇರವಾಗಿ ವ್ಯಕ್ತಿಯ ತಲೆಗೆ ಅಪ್ಪಳಿಸಿದ್ದು, ತೀವ್ರ ರಕ್ತಸ್ರಾವದಿಂದಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶಿರೂರ ಗ್ರಾಮದ ನಿವಾಸಿ ಎಂದು ಗುರುತು

ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ವಾಹನ ನಿಲ್ಲಿಸಿ ತಕ್ಷಣ ಕುಂದಗೋಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತನನ್ನು ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ನಿವಾಸಿ ಎಂದು ಪ್ರಾಥಮಿಕವಾಗಿ ಗುರುತಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸಂಚಾರ ಅಸ್ತವ್ಯಸ್ತ, ಪ್ರಕರಣ ದಾಖಲು

ಈ ಭೀಕರ ಘಟನೆಯಿಂದಾಗಿ ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಜಿಗ್‌ಜಾಗ್ ಆಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಬಂದು ವಾಹನಗಳನ್ನು ತೆರವುಗೊಳಿಸಿ ರಸ್ತೆ ಸುಗಮಗೊಳಿಸಿದರು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಪೂರ್ಣ ವಿವರ ಹಾಗೂ ಟಿಪ್ಪರ್ ಚಾಲಕನ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !