July 3, 2026
Friday, July 3, 2026
spot_img

ನಕಲಿ ಯೂಟ್ಯೂಬರ್‌ಗಳಿಗೆ ಎಸ್ಪಿ ಖಡಕ್ ಎಚ್ಚರಿಕೆ: ಬ್ಲ್ಯಾಕ್‌ಮೇಲ್ ಮಾಡಿದ್ರೆ ರೌಡಿಶೀಟ್ ಫಿಕ್ಸ್

ಹೊಸದಿಗಂತ ವರದಿ ​ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ ಯೂಟ್ಯೂಬರ್ಸ್ ಹಾಗೂ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ದೊಡ್ಡದೊಂದು ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಈಗ ಕಠಿಣ ಕಾನೂನು ಅಸ್ತ್ರವನ್ನು ಕೈಗೆತ್ತಿಕೊಂಡಿದೆ.

ಮಾಧ್ಯಮಗಳ ಹೆಸರಿನಲ್ಲಿ ಸಮಾಜದಲ್ಲಿ ಕಾನೂನುಬಾಹಿರ ಕೃತ್ಯ ಎಸಗುತ್ತಿರುವ ನಕಲಿ ಜರ್ನಲಿಸ್ಟ್ಗಳಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಕೆ. ರಾಮರಾಜನ್ ಅವರು ನೇರವಾಗಿ ಕಠಿಣ ಎಚ್ಚರಿಕೆ ನೀಡಿದ್ದು, ಬ್ಲ್ಯಾಕ್ಮೇಲ್ ಮಾಡುವವರ ವಿರುದ್ಧ ಇನ್ಮುಂದೆ ‘ರೌಡಿಶೀಟ್’ ದಾಖಲಿಸುವುದಾಗಿ ಗುಡುಗಿದ್ದಾರೆ.

ಅಧಿಕಾರಿಗಳು, ರೈತರೇ ಇವರ ಟಾರ್ಗೆಟ್:

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯೂಟ್ಯೂಬ್ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ಕೆಲವರು ತಾವೇ ಪತ್ರಕರ್ತರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮುಗ್ದ ರೈತರಿಂದ ಹಿಡಿದು ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳವರೆಗೆ ಎಲ್ಲರನ್ನೂ ಟಾರ್ಗೆಟ್ ಮಾಡಿ, ತೇಜೋವಧೆ ಮಾಡುವ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.
ಈ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಕೆ. ರಾಮರಾಜನ್ ಅವರು, ಇಂತಹ ಜಾಲಗಳ ವಿರುದ್ಧ ಇಲಾಖೆ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು.

“ಯೂಟ್ಯೂಬರ್ಸ್ ಅಥವಾ ಆಕ್ಟಿವಿಸ್ಟ್ಗಳ ಹೆಸರಿನಲ್ಲಿ ಯಾರಾದರೂ ವೈಯಕ್ತಿಕ ಇಮೇಜ್ ಹಾಳು ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟರೆ, ಸಾರ್ವಜನಿಕರು ಹಾಗೂ ಅಧಿಕಾರಿಗಳು ಧೈರ್ಯವಾಗಿ ಬಂದು ಪೊಲೀಸ್ ಇಲಾಖೆಗೆ ದೂರು ನೀಡಬೇಕು. ಅಂತವರ ವಿರುದ್ಧ ಕಠಿಣ ಹಣ ವಸೂಲಿ (Extortion) ಪ್ರಕರಣ ದಾಖಲಿಸಿ, ತಕ್ಷಣವೇ ಬಂಧಿಸಲಾಗುವುದು.” ಎಂದು ಡಾ. ಕೆ. ರಾಮರಾಜನ್ ಆದೇಶಿಸಿದರು.

ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ಅಧಿಕೃತ ಪತ್ರಕರ್ತರ ಸೋಗಿನಲ್ಲಿ ಬರುವ ನಕಲಿಗಳಿಗೆ ಇನ್ಮುಂದೆ ಪೊಲೀಸ್ ಇಲಾಖೆಯ ಗೇಟ್ ಒಳಗೂ ಪ್ರವೇಶವಿರುವುದಿಲ್ಲ. ಇನ್ಮುಂದೆ ಕೇವಲ ಅಧಿಕೃತ ಹಾಗೂ ಸರ್ಕಾರದ ನಿಯಮಾವಳಿಗಳಡಿ ನೋಂದಾಯಿತವಾಗಿರುವ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಪೊಲೀಸ್ ಇಲಾಖೆಯ ಸುದ್ದಿಗೋಷ್ಠಿ ಮತ್ತು ಮಾಹಿತಿ ವಿನಿಮಯಕ್ಕೆ ಮುಕ್ತ ಅವಕಾಶ ನೀಡಲಾಗುವುದು.

ಸುದ್ದಿಗೋಷ್ಠಿ ನೆಪದಲ್ಲಿ ಬರುವ ನಕಲಿ ಮತ್ತು ಬ್ಲ್ಯಾಕ್ಮೇಲ್ ಯೂಟ್ಯೂಬರ್ಗಳನ್ನು ಕಠಿಣವಾಗಿ ಹೊರದಬ್ಬಲಾಗುವುದು ಎಂದು ಎಸ್ಪಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಲಾಖೆಯ ಮುಂದಿನ ಕಠಿಣ ಕ್ರಮಗಳು:

ದೂರು ನೀಡಲು ಮುಕ್ತ ಅವಕಾಶ: ಬ್ಲ್ಯಾಕ್ಮೇಲ್ ತಂತ್ರಕ್ಕೆ ಹೆದರಿ ಹಣ ನೀಡದೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಬಹುದು.

ರೌಡಿಶೀಟರ್ ಪಟ್ಟಿ ಸೇರ್ಪಡೆ: ಮಾಧ್ಯಮದ ಹೆಸರಿನಲ್ಲಿ ವಸೂಲಿಗಿಳಿಯುವ ಕೃತ್ಯ ಮರುಕಳಿಸಿದರೆ ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲಾಗುವುದು.

ಖಡಕ್ ನಿಗಾ: ಸಾಮಾಜಿಕ ಜಾಲತಾಣಗಳಲ್ಲಿ ಬ್ಲ್ಯಾಕ್ಮೇಲ್ ಉದ್ದೇಶದಿಂದಲೇ ಪೋಸ್ಟ್ ಹಾಗೂ ವಿಡಿಯೋ ಹಾಕುವವರ ಮೇಲೆ ಸೈಬರ್ ಕ್ರೈಂ ವಿಭಾಗ ತೀವ್ರ ನಿಗಾ ಇರಿಸಲಿದೆ.

ಮಾಧ್ಯಮ ರಂಗದ ಪಾವಿತ್ರ್ಯತೆಯನ್ನು ಹಾಳುಗೆಡವುತ್ತಾ, ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ನಕಲಿ ಜರ್ನಲಿಸ್ಟ್ ಗಳ ಸದ್ದಡಗಿಸಲು ಬೆಳಗಾವಿ ಪೊಲೀಸರು ಕೈಗೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !