July 2, 2026
Thursday, July 2, 2026
spot_img

ಹೊನ್ನಾವರದಲ್ಲಿ ವರುಣನ ಆರ್ಭಟ; NH 66ರಲ್ಲಿ ಭಾರಿ ಭೂಕುಸಿತ, ಏಕಮುಖ ಸಂಚಾರ ಸಂಪೂರ್ಣ ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರಾವಳಿ ಭಾಗದಲ್ಲಿ ನಿರಂತರವಾಗಿ ಜಿಟಿಜಿಟಿ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ಹೊನ್ನಾವರ ತಾಲೂಕಿನ ಮುತ್ನಾಳ ಗ್ರಾಮದ ಹತ್ತಿರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ (NH 66) ಭಾರಿ ಭೂಕುಸಿತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಿಂದ ಮಣ್ಣು ಮತ್ತು ಬೃಹತ್ ಕಲ್ಲು ಬಂಡೆಗಳು ಒಮ್ಮೆಲೇ ಹೆದ್ದಾರಿಯ ಮೇಲೆ ಕುಸಿದು ಬಿದ್ದಿವೆ. ಈ ಘಟನೆಯಿಂದಾಗಿ ಗೋವಾ ಮತ್ತು ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಏಕಮುಖ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಹೊನ್ನಾವರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಧಾವಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್:

ಹೆದ್ದಾರಿಯ ಒಂದು ಬದಿಯ ರಸ್ತೆಯನ್ನು ಮಣ್ಣು ಪೂರ್ತಿಯಾಗಿ ಆವರಿಸಿಕೊಂಡಿರುವುದರಿಂದ ವಾಹನ ಸವಾರರು ಸಂಚರಿಸಲು ಸಾಧ್ಯವಾಗುತ್ತಿಲ್ಲ.ಕಾರವಾರ-ಹೊನ್ನಾವರ-ಕುಂದಾಪುರ ಮಾರ್ಗವಾಗಿ ಸಂಚರಿಸುವ ನೂರಾರು ಲಾರಿ, ಬಸ್ ಹಾಗೂ ಲಘು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದು, ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಮಳೆಯಲ್ಲಿಯೇ ಪರದಾಡುವಂತಾಗಿದೆ. ಸದ್ಯಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮತ್ತೊಂದು ಬದಿಯ ರಸ್ತೆಯಲ್ಲೇ ಏಕಾಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡುತ್ತಿದ್ದಾರೆ.

ಇದನ್ನೂ ಓದಿ:

ಮಣ್ಣು ತೆರವು ಕಾರ್ಯಾಚರಣೆ:

ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ 3ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆಗೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ಹೊರಹಾಕಲು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮತ್ತು ಗುಡ್ಡದ ಮೇಲ್ಭಾಗದಿಂದ ಮತ್ತೆ ಮಣ್ಣು ಜಾರುವ ಭೀತಿ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಆದಷ್ಟು ಬೇಗ ಹೆದ್ದಾರಿಯನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !