ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭವಿಷ್ಯದಲ್ಲಿ ವಿದ್ಯುತ್ ಕೊರತೆ ಎದುರಾಗದಂತೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಎಲ್ ನಿನೊ ಪರಿಣಾಮದಿಂದ ಜಲವಿದ್ಯುತ್ ಉತ್ಪಾದನೆ ಕುಸಿಯುವ ಸಾಧ್ಯತೆಯನ್ನು ಉಲ್ಲೇಖಿಸಿದ ಅವರು, ವಿದ್ಯುತ್ ಸಂಗ್ರಹ, ಪರ್ಯಾಯ ಉತ್ಪಾದನೆ ಹಾಗೂ ಇಂಧನ ಭದ್ರತೆಗೆ ಸಂಬಂಧಿಸಿದ ತುರ್ತು ಕಾರ್ಯಯೋಜನೆ ರೂಪಿಸುವಂತೆ ಇಂಧನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿದ್ಯುತ್ ಸಂಗ್ರಹ ಮತ್ತು ಉತ್ಪಾದನೆಗೆ ಆದ್ಯತೆ
ಬರ ಪರಿಸ್ಥಿತಿ ಎದುರಾದರೂ ಸಾರ್ವಜನಿಕರಿಗೆ ವಿದ್ಯುತ್ ಕೊರತೆ ಆಗದಂತೆ ಕಲ್ಲಿದ್ದಲು ಸಂಗ್ರಹ ಹೆಚ್ಚಿಸಬೇಕು. ಸರ್ಕಾರಕ್ಕೆ ಮೀಸಲಾದ ಕಲ್ಲಿದ್ದಲು ಗಣಿಗಳನ್ನು ಸಕ್ರಿಯಗೊಳಿಸಿ, ಪರ್ಯಾಯ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ಇದನ್ನೂ ಓದಿ:
ಭವಿಷ್ಯದ ಬೇಡಿಕೆಗೆ ಈಗಲೇ ಸಿದ್ಧತೆ
ರಾಜ್ಯದಲ್ಲಿ ಡೇಟಾ ಸೆಂಟರ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವಲಯದ ಬೆಳವಣಿಗೆಯಿಂದ ವಿದ್ಯುತ್ ಬೇಡಿಕೆ ಮತ್ತಷ್ಟು ಏರಿಕೆಯಾಗಲಿದೆ. 2035ರ ವೇಳೆಗೆ ನಿರೀಕ್ಷಿತ ಬೇಡಿಕೆಗೆ ತಕ್ಕಂತೆ ಉತ್ಪಾದನಾ ಸಾಮರ್ಥ್ಯ ಹಾಗೂ ಹಣಕಾಸು ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ನವೀಕರಿಸಬಹುದಾದ ಇಂಧನಕ್ಕೆ ಒತ್ತು
ಬ್ಯಾಟರಿ ಎನರ್ಜಿ ಸ್ಟೋರೇಜ್ ವ್ಯವಸ್ಥೆ, ಪಂಪ್ಡ್ ಸ್ಟೋರೇಜ್ ಯೋಜನೆ, ಫೀಡರ್ ಸೌರೀಕರಣ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ವೇಗಗೊಳಿಸುವಂತೆ ಸಿಎಂ ಸೂಚಿಸಿದರು. ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸಿ, ತಾಂತ್ರಿಕ ಹಾಗೂ ಭೂಸ್ವಾಧೀನ ಸಮಸ್ಯೆಗಳನ್ನು ಶೀಘ್ರ ಪರಿಷ್ಕರಿಸಿ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ತಿಳಿಸಿದರು.



