ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಅದ್ಭುತ ಸೌಂದರ್ಯ ಮತ್ತು ಮನಮೋಹಕ ನಟನೆಯ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದ ಸ್ಟಾರ್ ನಟಿ ರಂಭಾ. ಅಂದಿನ ಸೂಪರ್ ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ರಂಭಾ ಅವರ ಇಂದಿನ ಪರಿಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ನೆಟ್ಟಿಗರನ್ನು ಭಾವುಕರನ್ನಾಗಿಸಿದ ವೈರಲ್ ವಿಡಿಯೋ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಂಭಾ ಅವರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಸಿನಿಪ್ರೇಕ್ಷಕರು ಮರುಗುತ್ತಿದ್ದಾರೆ. ಆ ವಿಡಿಯೋದಲ್ಲಿ ರಂಭಾ ಅವರಿಗೆ ಕನಿಷ್ಠ ಪಕ್ಷ ಸರಿಯಾಗಿ ನಿಲ್ಲಲು ಮತ್ತು ನಡೆದಾಡಲು ಆಗುತ್ತಿಲ್ಲ. ಅತ್ಯಂತ ಕಷ್ಟಪಟ್ಟು, ಯಾರದ್ದೋ ಸಹಾಯ ಪಡೆದು ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.

ಆರೋಗ್ಯ ಸಮಸ್ಯೆಗೆ ಅಪಘಾತವೇ ಕಾರಣವೇ?
ಮೂಲಗಳ ಪ್ರಕಾರ, ಈ ಹಿಂದೆ ಸಂಭವಿಸಿದ ಭೀಕರ ಕಾರು ಅಪಘಾತದ ಗಾಯಗಳು ಅಥವಾ ತೀವ್ರವಾದ ಮಂಡಿ ನೋವಿನ ಸಮಸ್ಯೆಯಿಂದಾಗಿ ಅವರು ಈ ರೀತಿ ನಡೆದಾಡಲು ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ. ನಟಿ ರಂಭಾ ಅವರ ಕಾರು ಅಪಘಾತವು 2022ರ ನವೆಂಬರ್‌ನಲ್ಲಿ ಕೆನಡಾದ ಟೊರೊಂಟೊದಲ್ಲಿ ಸಂಭವಿಸಿತ್ತು. ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ಅವರ ಕಾರಿಗೆ ಮತ್ತೊಂದು ವಾಹನ ಡಿಕ್ಕಿಯಾಗಿತ್ತು. ಆ ಹಳೇ ಗಾಯದ ಸಮಸ್ಯೆಯೇ ಈಗ ಅವರನ್ನು ಕಾಡುತ್ತಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.



