July 5, 2026
Sunday, July 5, 2026
spot_img

ಮತದಾರರ ಹಕ್ಕು ರಕ್ಷಣೆಯೇ ನಮ್ಮ ಗುರಿ: ವಿರೋಧ ಪಕ್ಷಗಳಿಗೆ ಯು.ಟಿ.ಖಾದರ್ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ಉಡುಪಿಯ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಈ ವಿಷಯದಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು. ಚುನಾವಣಾ ಆಯೋಗಕ್ಕೆ ಕೇವಲ ಬೆಂಬಲ ಮತ್ತು ಸಹಕಾರ ನೀಡುವುದು ಮಾತ್ರ ಸರ್ಕಾರದ ಕೆಲಸ. ಆಕ್ಷೇಪಣೆಗಳಿದ್ದರೆ ರಾಜಕೀಯ ಮಾಡುವುದನ್ನು ಬಿಟ್ಟು ನೇರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಿ ಎಂದು ಅವರು ಸವಾಲು ಹಾಕಿದರು.

ಮತದಾನದ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಬದ್ಧ

ಯಾವುದೇ ಒಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಎನ್ನುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಆಶಯವಾಗಿದೆ. ಎಸ್‌ಐಆರ್ ದುರುಪಯೋಗವಾಗುವುದನ್ನು ತಡೆಯುವುದು ಮತ್ತು ನೈಜ ಮತದಾರರ ಹಿತ ಕಾಯುವುದು ನಮ್ಮ ಆದ್ಯತೆ ಎಂದು ಸಚಿವರು ಪುನರುಚ್ಚರಿಸಿದರು.

ಬಿಡದಿ ಟೌನ್‌ಶಿಪ್ ಅಭಿವೃದ್ಧಿಗೆ ಪೂರಕ

ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಮಾತನಾಡಿದ ಅವರು, ಹೊಸ ಯೋಜನೆಗಳು ಬಂದಾಗ ಆರಂಭದಲ್ಲಿ ಪ್ರತಿರೋಧ ಸಹಜ ಎಂದರು. ಹಿಂದೆ ದೇಶದಲ್ಲಿ ಕಲರ್ ಟಿವಿ ಹಾಗೂ ಕಂಪ್ಯೂಟರ್ ತಂದಾಗಲೂ ಇಂತಹದೇ ವಿರೋಧವಿತ್ತು ಎಂದು ನೆನಪಿಸಿದರು. ರಾಜ್ಯದ ಮುಂದಿನ ಬೆಳವಣಿಗೆಗೆ ನಾಲ್ಕೈದು ಉಪನಗರಗಳ (Satellite Towns) ಅಗತ್ಯವಿದೆ. ಕೇವಲ ಸ್ವಯಂಪ್ರೇರಿತರಾಗಿ ಭೂಮಿ ನೀಡುವವರಿಂದ ಮಾತ್ರ ಜಮೀನು ಪಡೆದು, ಯೋಜನೆ ಮುಂದುವರಿಸಲಾಗುವುದು ಎಂದು ಖಾದರ್ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !