July 6, 2026
Monday, July 6, 2026
spot_img

‘ಟಾಕ್ಸಿಕ್’ ಚಿತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟ ಹುಮಾ ಖುರೇಷಿ: ಫ್ಯಾನ್ಸ್‌ಗೆ ಕಾದಿದೆ ಬಿಗ್ ಸರ್ಪ್ರೈಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ನಟನೆಯ, ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಇತ್ತೀಚೆಗಷ್ಟೇ ‘ಲೇಡಿಸ್ ಆ್ಯಂಡ್ ಲೇಡಿಸ್’ ಹೆಸರಿನ ಟೀಸರ್ ಬಿಡುಗಡೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಗ್ಯಾಂಗ್‌ಸ್ಟರ್ ಹಿನ್ನೆಲೆಯ ಈ ಚಿತ್ರದ ಹೆಣ್ಣು ಮಕ್ಕಳ ಗ್ಯಾಂಗ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದೀಗ ಚಿತ್ರದಲ್ಲಿ ‘ಎಲಿಜಬೆತ್’ ಪಾತ್ರಧಾರಿ, ಬಾಲಿವುಡ್ ನಟಿ ಹುಮಾ ಖುರೇಷಿ ಚಿತ್ರದ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕಿ ಗೀತು ಬೆಂಬಲಕ್ಕೆ ನಿಂತ ಹುಮಾ

ಸಂದರ್ಶನವೊಂದರಲ್ಲಿ ಮಾತನಾಡಿದ ಹುಮಾ, “ಪ್ರೇಕ್ಷಕರು ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆಂದೂ ಇಂತಹ ಮಾಸ್ಟರ್‌ಪೀಸ್ ನೋಡಿರಲು ಸಾಧ್ಯವಿಲ್ಲ. ಚಿತ್ರದ ಪ್ರತಿ ಪಾತ್ರವೂ ಅದ್ಭುತವಾಗಿದೆ,” ಎಂದಿದ್ದಾರೆ. ಮುಂದುವರಿದು, “ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಮಾತು ಕೇಳಲು ಹಲವು ನಾಯಕ ನಟರು ಹಿಂಜರಿಯುತ್ತಾರೆ. ಆದರೆ ಸೂಪರ್‌ಸ್ಟಾರ್ ಯಶ್ ಅವರು ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಅತ್ಯಂತ ಗೌರವಯುತ ಹಾಗೂ ಆರೋಗ್ಯಕರ ಒಡನಾಟ ಹೊಂದಿದ್ದಾರೆ. ಇಡೀ ತಂಡವನ್ನು ಗೀತು ಮುನ್ನಡೆಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ,” ಎಂದು ಚಿತ್ರರಂಗದ ಕಹಿ ಸತ್ಯದ ಜೊತೆಗೆ ತಂಡದ ಶಿಸ್ತನ್ನು ಕೊಂಡಾಡಿದ್ದಾರೆ.

ಹುಮಾ ಖುರೇಷಿ ಸಾಹಸಕ್ಕೆ ಯಶ್ ಹೆಮ್ಮೆ

ಇನ್ನೊಂದೆಡೆ, ಹುಮಾ ಖುರೇಷಿ ನಟಿಸಿ, ನಿರ್ಮಿಸಿರುವ ಹೊಸ ಚಿತ್ರ ‘ಬೇಬಿ ಡೋ ಡೈ ಡೋ’ ಗೆ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಬಲ ಸೂಚಿಸಿದ್ದಾರೆ. “ಚಿತ್ರ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ, ಅದಕ್ಕೆ ಅಪಾರ ಧೈರ್ಯ ಬೇಕು. ಹುಮಾ ಸುಲಭದ ಹಾದಿ ಬಿಟ್ಟು ಕಷ್ಟದ ಹಾದಿ ಆಯ್ದುಕೊಂಡಿದ್ದಾರೆ,” ಎಂದು ಅವರ ಸಿನಿಮಾ ಪ್ರೀತಿಯನ್ನು ರಾಕಿಂಗ್ ಸ್ಟಾರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಹನಟರ ನಡುವಿನ ಈ ಪರಸ್ಪರ ಗೌರವ ಈಗ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !