August 27, 2026
Thursday, August 27, 2026
spot_img

ಮಳೆ ಆರ್ಭಟಕ್ಕೆ ಬೆಳಗಾವಿ ತತ್ತರ: ಜಲಾವೃತಗೊಂಡ ಸಂಗಮೇಶ್ವರ, ಮುಳುಗಡೆ ಅಂಚಿನಲ್ಲಿ ದತ್ತ ಪೀಠ

ಹೊಸದಿಗಂತ ವರದಿ ಬೆಳಗಾವಿ:

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗಡಿಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಇದೀಗ ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ.

24 ಗಂಟೆಗಳಲ್ಲಿ 10 ಅಡಿ ಹೆಚ್ಚಿದ ನೀರಿನ ಮಟ್ಟ:

ಕಳೆದ 24 ಗಂಟೆಗಳಲ್ಲಿ ಸುರಿದಿರುವ ಬಿಡುಗಣ್ಣಿಲ್ಲದ ಮಳೆಯಿಂದಾಗಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟ ಬರೋಬ್ಬರಿ 10 ಅಡಿಗಳಷ್ಟು ಹೆಚ್ಚಾಗಿದ್ದು, ಪ್ರವಾಹದ ನೀರು ನದಿತೀರದ ಪ್ರಸಿದ್ಧ ದತ್ತ ಮಂದಿರದ ಸಮೀಪಕ್ಕೆ ಬಂದು ತಲುಪಿದೆ. ಇನ್ನು ಕೆಲವು ಗಂಟೆಗಳ ಕಾಲ ಮಳೆ ಹೀಗೆಯೇ ಮುಂದುವರಿದರೆ ದತ್ತ ಮಂದಿರವು ಸಂಪೂರ್ಣವಾಗಿ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.

ದೇವಸ್ಥಾನ ಮಂಡಳಿಯಿಂದ ಹೈ ಅಲರ್ಟ್ ಘೋಷಣೆ:

ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ದತ್ತ ದೇವಸ್ಥಾನದ ಆಡಳಿತ ಮಂಡಳಿಯು ಜಾಗೃತರಾಗಿ “ಹೈ ಅಲರ್ಟ್” ಘೋಷಿಸಿದೆ. ಪ್ರವಾಹದ ನೀರು ಗರ್ಭಗುಡಿಗೆ ನುಗ್ಗುವ ಮುನ್ಸೂಚನೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ನದಿ ದಡದಲ್ಲಿರುವ ದೇವಸ್ಥಾನದ ಧಾರ್ಮಿಕ ಸಾಹಿತ್ಯ, ಪೂಜಾ ಸಾಮಗ್ರಿಗಳು ಹಾಗೂ ಕಚೇರಿಯ ಅಗತ್ಯ ವಸ್ತುಗಳನ್ನು ತರಾತುರಿಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ:

ಸಂಪೂರ್ಣ ನೀರಿನಲ್ಲಿ ಮುಳುಗಿದ ಸಂಗಮೇಶ್ವರ ದೇವಾಲಯ:

ಇದೇ ವೇಳೆ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಪವಿತ್ರ ಸಂಗಮ ಸ್ಥಾನದಲ್ಲಿರುವ ಪ್ರಸಿದ್ಧ ಸಂಗಮೇಶ್ವರ ದೇವಾಲಯವು ಪ್ರವಾಹದ ಭೀಕರತೆಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇಡೀ ದೇವಸ್ಥಾನ ಜಲಾವೃತಗೊಂಡಿರುವ ದೃಶ್ಯಗಳು ಸ್ಥಳೀಯರಲ್ಲಿ ಭೀತಿ ಮೂಡಿಸಿವೆ.

ನದಿತೀರದ ಜನರಲ್ಲಿ ಹೆಚ್ಚಿದ ಆತಂಕ:

ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಕೇವಲ ಭಕ್ತರಷ್ಟೇ ಅಲ್ಲದೆ, ನದಿ ಪಾತ್ರದ ಗ್ರಾಮಗಳ ಜನರಲ್ಲಿಯೂ ತೀವ್ರ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ನದಿತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ. ನದಿ ತೀರಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರು ತೆರಳದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !