Monday, September 8, 2025

ಹಿಮಾಚಲ ಪ್ರದೇಶದಲ್ಲಿ ವಿಶೇಷ ಸಂಪ್ರದಾಯ: ಒಂದೇ ಯುವತಿಯ ಮದುವೆಯಾದ ಸಹೋದರರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಪದ್ಧತಿ ಬೆಳಕಿಗೆ ಬಂದಿದೆ. ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ವಿವಾಹವಾಗಿದ್ದು, ಕಲಿಯುಗದಲ್ಲಿ ದ್ವಾಪರ ಯುಗದ ದ್ರೌಪದಿಯನ್ನ ನೆನಪಿಸಿದೆ.

ಹಿಮಾಚಲ ಪ್ರದೇಶದ ಶಿಲ್ಲೈ ಗ್ರಾಮದಲ್ಲಿ ಒಂದೇ ಯುವತಿಯನ್ನು ಇಬ್ಬರು ಸಹೋದರರು ಮದುವೆಯಾಗಿದ್ದು, ಬಹುಪತಿತ್ವದ ಆಚರಣೆಗೆ ನೂರಾರು ಜನ ಸಾಕ್ಷಿಯಾದರು.

ಹಟ್ಟಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಈ ವಿವಾಹವು ನೆರವೇರಿದ್ದು, ಸಹೋದರಾದ ಪ್ರದೀಪ್‌ ಮತ್ತು ಕಪಿಲ್‌, ಸುನೀತಾ ಎಂಬುವರನ್ನು ವರಿಸಿದ್ದಾರೆ.

ಮೂವರು ಒಟ್ಟಿಗೆ ಸೇರಿ ತೆಗೆದುಕೊಂಡ ನಿರ್ಧಾರವಿದು ಎಂದು ವರ ಪ್ರದೀಪ್‌ ಹೇಳಿದ್ದಾರೆ. ನಮ್ಮ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ. ಅದಕ್ಕಾಗಿಯೇ ಬಹಿರಂಗವಾಗಿ ನಮ್ಮ ಸಂಪ್ರದಾಯವನ್ನು ಅಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಶಿಲ್ಲೈ ಗ್ರಾಮದ ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ನಾನು ವಿದೇಶದಲ್ಲಿರಬಹುದು. ಆದರೆ, ಮೂವರು ಒಂದಾಗಿ ಸಂಸಾರವನ್ನು ಸಾಗಿಸುತ್ತೇವೆ. ಸಂಪ್ರದಾಯ ಉಳಿಸುವ ಈ ಪಯಣದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುತ್ತೇವೆ ಎಂದು ಕಪಿಲ್‌ ಹೇಳಿದ್ದಾರೆ.

ಇನ್ನು ಇದು ಸಂಪೂರ್ಣವಾಗಿ ನನ್ನ ಆಯ್ಕೆಯಾಗಿತ್ತು. ಯಾರ ಒತ್ತಾಯದಿಂದ ಈ ನಿರ್ಧಾರ ಮಾಡಿಲ್ಲ. ನನಗೆ ನನ್ನ ಸಂಪ್ರದಾಯದ ಬಗ್ಗೆ ಹೆಮ್ಮೆ ಇದೆ. ಆದ್ದರಿಂದ ಇದನ್ನು ಸ್ವಇಚ್ಛೆಯಿಂದ ಆರಿಸಿಕೊಂಡೆ ಎಂದು ವಧು ಸುನೀತಾ ಹೇಳಿದ್ದಾರೆ.

ಈ ವಿವಾಹ ಸಮಾರಂಭವು ಸಿರ್ಮೌರ್ ಜಿಲ್ಲೆಯ ಗಿರಿಯಾಚಗಿನ ಪ್ರದೇಶದಲ್ಲಿ ಜುಲೈ 12 ರಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯಿತು. ಸ್ಥಳೀಯ ಜಾನಪದ ಗೀತೆಗಳು ಮತ್ತು ನೃತ್ಯಗಳು ಸಮಾರಂಭಕ್ಕೆ ಮೆರುಗು ತಂದವು. ಈ ವಿವಾಹದ ವಿಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಈ ಪ್ರದೇಶದಲ್ಲಿ ಬಹುಪತಿತ್ವ ಸಾಮಾನ್ಯ ಆಚರಣೆಯಾಗಿದ್ದು, ಪೂರ್ವಜರ ಭೂಮಿ ವಿಭಜನೆಯಾಗದಂತೆ ತಡೆಯಲು, ಹೆಣ್ಣು ವಿಧವೆಯಾಗುವುದನ್ನು ತಪ್ಪಿಸುವುದಕ್ಕೆ ಪೂರ್ವಜರು ಕಂಡುಕೊಂಡ ಮಾರ್ಗವಿದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ