ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಇಂಜಿನ್‌ಗಳು ಹಾಳಾಗುತ್ತಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಹಳೆಯ ವಾಹನಗಳ ಮೈಲೇಜ್ ಕುಸಿತ ಮತ್ತು ದೀರ್ಘಕಾಲೀನ ಹಾನಿಯ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ವಿರೋಧಿಗಳಿಗೆ ನಿತಿನ್ ಗಡ್ಕರಿ ಸವಾಲು
ಈ ಕಳವಳಗಳ ಮಧ್ಯೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ನಡೆದ ‘ವಿಕಸಿತ್ ಭಾರತ್ ಕಾನ್‌ಕ್ಲೇವ್’ನಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇ20 ಇಂಧನದಿಂದ ದೋಷಕ್ಕೊಳಗಾದ ಒಂದೇ ಒಂದು ಕಾರನ್ನು ಸಾರ್ವಜನಿಕವಾಗಿ ತೋರಿಸಿ ಎಂದು ಅವರು ವಿರೋಧಿಗಳಿಗೆ ಬಹಿರಂಗ ಸವಾಲು ಎಸೆದಿದ್ದಾರೆ.
ಇದೆಲ್ಲವೂ ಪ್ರಾಯೋಜಿತ ಅಪಪ್ರಚಾರ!
ಎಥನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ವ್ಯವಸ್ಥಿತವಾಗಿ ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ. “ಭಾರತದಲ್ಲಿ ಇ20 ಇಂಧನ ಬಳಕೆಯಿಂದಾಗಿ ಇದುವರೆಗೆ ಯಾವುದೇ ಕಾರು ತೊಂದರೆಗೆ ಸಿಲುಕಿಲ್ಲ. ತೊಂದರೆಯಾಗಿದ್ದರೆ ಅಂತಹ ಒಂದು ವಾಹನವನ್ನಾದರೂ ಹೆಸರಿಸಿ” ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಈ ನೆಗೆಟಿವ್ ಅಭಿಯಾನದ ಹಿಂದೆ ಕೆಲವರ ಸ್ವಾರ್ಥ ಹಿತಾಸಕ್ತಿ ಅಡಗಿದೆ ಎಂದು ಅವರು ದೂರಿದ್ದಾರೆ.



