July 8, 2026
Wednesday, July 8, 2026
spot_img

ಹರಳಯ್ಯ ಸ್ವಾಮೀಜಿಗೆ ಹಲ್ಲೆ: ಆರೋಗ್ಯ ವಿಚಾರಿಸಿದ ಷಡಾಕ್ಷರಮುನಿ ಸ್ವಾಮೀಜಿ, ಹಲ್ಲೆಕೋರರ ವಿರುದ್ದ ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ ಚಿತ್ರದುರ್ಗ:

ಐಮಂಗಲದ ಬಸವ ಹರಳಯ್ಯ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆಸಿರುವ ಹಲ್ಲೆಕೋರರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಹರಳಯ್ಯ ಸ್ವಾಮಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಮುನಿ ಸ್ವಾಮೀಜಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.


ಹಲ್ಲೆಯಿಂದ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಹರಳಯ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಅವರು, ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು.


ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಷಡಾಕ್ಷರಮುನಿ ಸ್ವಾಮೀಜಿ, ಮಠದ ಜಾಗದ ವಿಚಾರವಾಗಿ ಹಿರಿಯೂರು ತಾಲ್ಲೂಕು ಆದಿರಾಳು ಗ್ರಾಮದ ಲಿಂಗಾಯಿತ ಕೋಮಿಗೆ ಸೇರಿದ ಸಿದ್ದೇಶ್ವರ, ಆಕಾಶ್, ಶಿವಪ್ರಕಾಶ್ ಮತ್ತು ಬೆಂಬಲಿಗರು ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವುದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ಇದು ಕೇವಲ ಹಲ್ಲೆಯಲ್ಲ, ಹತ್ಯೆಯ ಸಂಚು ಎಂದು ಕಿಡಿಕಾರಿದರು. ಐಮಂಗಲ ಠಾಣೆಗೆ ದೂರು ನೀಡಲು ಸ್ವಾಮೀಜಿ ಹೋಗಿದ್ದಾಗ ಅಲ್ಲಿಯೂ ಪೊಲೀಸರ ಎದುರಿನಲ್ಲೇ ಹಲ್ಲೆ ನಡೆಸಿರುವುದನ್ನು ನೋಡಿದರೆ ಇವರ ದೌರ್ಜನ್ಯ ಮಿತಿ ಮೀರಿದೆ ಎನ್ನುವುದು ಗೊತ್ತಾಗುತ್ತದೆ. ಹಲ್ಲೆಕೋರರನ್ನು ರೌಡಿ ಪಟ್ಟಿಗೆ ಸೇರಿಸಿ ಗಡಿಪಾರು ಮಾಡಬೇಕು. ಈಗಾಗಲೆ ನ್ಯಾಯಾಂಗ ಬಂಧನದಲ್ಲಿರುವವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದೆಂದು ಸ್ವಾಮೀಜಿ ಆಗ್ರಹಿಸಿದರು.

ಇದನ್ನೂ ಓದಿ:


ಇದೇ ಸಂದರ್ಭದಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿಬಾಬು ಸ್ವಾಮೀಜಿಗಳಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ.ಗಳ ನೆರವು ನೀಡಿದರು. ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಪ್ರಿಯಾಂಕ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !