ಹೊಸದಿಗಂತ ವರದಿ ಚಿತ್ರದುರ್ಗ
ಎಸ್‌ಐಆರ್ ಪ್ರಕ್ರಿಯೆಯಿಂದ ಭಯಗೊಂಡಿರುವ ಕಾಂಗ್ರೆಸ್ ಪಕ್ಷ ಈ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮಸೀದಿಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಚಿತ್ರದುರ್ಗ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಆರ್ ಬಿಜೆಪಿ ಪಕ್ಷ ಅಥವಾ ಕೇಂದ್ರ ಸರ್ಕಾರದ ನಿರ್ಧಾರವಲ್ಲ. ಇದು ಕೇಂದ್ರ ಚುನಾವಣಾ ಆಯೋಗದ ನಿರ್ಧಾರ. ಹಾಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಆದರೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಎಸ್‌ಐಆರ್ ಕುರಿತು ಅಪಪ್ರಚಾರ ನಡೆಸುತ್ತಿದೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಎಸ್.ಸಿ., ಎಸ್.ಟಿ. ಹಣ ಲೂಟಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮಾಡಿದ್ದಾರೆ. ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಜೀವನ ಹಾಳು ಮಾಡಲಾಗುತ್ತಿದೆ. ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಿದ ಕಿಡಿಗೇಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಪೊಲೀಸರು, ಪುನೀತ್ ಕೆರೆಹಳ್‌ಳಿ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ, ದೇಶ ದ್ರೋಹಿಗಳ ವಿರೋಧಿ. ದೇಶದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಮತೆ ಬಾಳಬೇಕೆಂಬುದು ಬಿಜೆಪಿ ಪಕ್ಷದ ಆಶಯ ಎಂದ ಅವರು, ರಾಮ ಮಂದಿರ ಹಣ ದುರುಪಯೋಗ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಅವರಿಗೆ ತಾಕತ್ತಿದ್ದರೆ ನ್ಯಾಷನ್ ಹೆರಾಲ್ಡ್ ಹೆಸರಿನಲ್ಲಿ ಸಾವಿರಾರು ಕೋಟಿ ದುರುಪಯೋಗ ಮಾಡಿಕೊಂಡಿರುವ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ:
ಅಯೋದ್ಯೆ ಪ್ರಕರಣ ಕುರಿತು ಉತ್ತರಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಂಡಿದೆ. ಆದರೆ ಕಾಂಗ್ರೆಸ್‌ನವರು ಸಿಬಿಐ ತನಿಖೆ ನಡೆಬೇಕೆಂದು ಒತ್ತಾಯಿಸಿದ್ದಾರೆ. ವಾಲ್ಮೀಕಿ ಹಗರಣ ನಡೆದಾಗ ಸಿಬಿಐ ತನಿಖೆ ಏಕೆ ಮಾಡಿಸಲಿಲ್ಲ. ಹೊಸ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೀಗುತ್ತಿದ್ದಾರೆ. ದೀಪ ಹಾರುವ ಮೊದಲು ಜೋರಾಗಿ ಉರಿಯುವಂತೆ ಮೆರೆಯುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸುತ್ತಿರುವ ರಾಜ್ಯದ ಜನತೆ ನರಸತ್ತ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.



