ಚೀಸ್ ಎಂದರೆ ಬಹುತೇಕ ಜನರ ಫೇವರಿಟ್ ಆಹಾರ ಪದಾರ್ಥ. ಪಿಜ್ಜಾ, ಬರ್ಗರ್, ಪಾಸ್ತಾ ಅಥವಾ ಇನ್ನಿತರ ಫಾಸ್ಟ್‌ಫುಡ್‌ಗಳಲ್ಲಿ ಚೀಸ್ ಇಲ್ಲದಿದ್ದರೆ ಅವುಗಳ ರುಚಿ ಸಂಪೂರ್ಣ ಅನಿಸೋದಿಲ್ಲ. ಆದರೆ ಜಗತ್ತಿನಲ್ಲಿಯೇ ಅತಿ ದುಬಾರಿ ಚೀಸ್ ಯಾವ ಹಾಲಿನಿಂದ ಸಿದ್ಧಗೊಳ್ಳುತ್ತದೆ ಗೊತ್ತೇ? ಹಸು, ಎಮ್ಮೆ, ಕುರಿ ಅಥವಾ ಮೇಕೆ ಹಾಲಲ್ಲ, ಬದಲಾಗಿ ಕತ್ತೆಯ ಹಾಲಿನಿಂದ ತಯಾರಾಗುವ ಚೀಸ್‌ಗೇ ವಿಶ್ವದ ಅತಿ ದುಬಾರಿ ಚೀಸ್ ಎಂಬ ಹೆಗ್ಗಳಿಕೆ ಸಿಕ್ಕಿದೆ.

ಸರ್ಬಿಯಾದ ಜಸಾವಿಕಾ ಪ್ರದೇಶದಲ್ಲಿ ಸಿಗುವ ಬಲ್ಕಾನ್ ಜಾತಿಯ ಕತ್ತೆಗಳ ಹಾಲಿನಿಂದ ತಯಾರಾಗುವ ಚೀಸ್‌ನ್ನು “ಪ್ಯೂಲೆ ಚೀಸ್” ಎಂದು ಕರೆಯಲಾಗುತ್ತದೆ. ಇದರ ತಯಾರಿಕೆಗೆ ಕತ್ತೆಯ ಹಾಲಿಗೆ ಶೇಕಡಾ 40 ರಷ್ಟು ಮೇಕೆ ಹಾಲು ಸೇರಿಸಲಾಗುತ್ತದೆ. ಒಂದು ಕೆಜಿ ಪ್ಯೂಲೆ ಚೀಸ್ ಮಾಡಲು ಸುಮಾರು 25 ಲೀಟರ್ ಕತ್ತೆಯ ಹಾಲು ಬೇಕಾಗುತ್ತದೆ. ಆದರೆ ಒಂದು ಕತ್ತೆ ದಿನಕ್ಕೆ ಕೇವಲ 0.2 ರಿಂದ 0.3 ಲೀಟರ್ ಹಾಲು ಮಾತ್ರ ಕೊಡುತ್ತದೆ. ಈ ಕಾರಣದಿಂದ ಉತ್ಪಾದನೆ ತುಂಬಾ ಕಷ್ಟಸಾಧ್ಯ. ಇದರಿಂದಲೇ ಇದರ ಬೆಲೆ ಅಬ್ಬರದ ಮಟ್ಟಿಗೆ ಏರಿದೆ. ಒಂದು ಕೆಜಿ ಪ್ಯೂಲೆ ಚೀಸ್‌ಗೆ ಸುಮಾರು 80 ರಿಂದ 82 ಸಾವಿರ ರೂಪಾಯಿ ಬೆಲೆ ಇದೆ.

ಇಷ್ಟೇ ಅಲ್ಲದೆ, ಕತ್ತೆಯ ಹಾಲು ಸ್ಕಿನ್ ಕೇರ್ ಉತ್ಪನ್ನಗಳಿಗೂ ಹೆಚ್ಚು ಬಳಸಲಾಗುತ್ತದೆ. ಭಾರತದಲ್ಲಿ ಕತ್ತೆಗಳ ಸಂಖ್ಯೆ ಕಡಿಮೆಯಿರುವುದರಿಂದ ಇಲ್ಲಿ ಇದರ ಉತ್ಪಾದನೆ ಅಸಾಧ್ಯ. ಹೀಗಾಗಿ ಕತ್ತೆಯ ಹಾಲಿನಿಂದ ತಯಾರಾಗುವ ಪ್ಯೂಲೆ ಚೀಸ್ ಜಗತ್ತಿನ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಚೀಸ್ ಎಂಬ ಸ್ಥಾನ ಪಡೆದುಕೊಂಡಿದೆ.