July 9, 2026
Thursday, July 9, 2026
spot_img

IFFM 2026 ನಾಮಿನೇಷನ್ ಪ್ರಕಟ: ಅತ್ಯುತ್ತಮ ನಟ ರೇಸ್‌ನಲ್ಲಿ ಆಮಿರ್ ಖಾನ್, ಮಮ್ಮುಟ್ಟಿ ಜತೆ ರಿಷಬ್ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರತಿಷ್ಠಿತ ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವದ (IFFM) 17ನೇ ಆವೃತ್ತಿಯ 2026 ರ ಪ್ರಶಸ್ತಿಗಳ ನಾಮನಿರ್ದೇಶನ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಬಾರಿಯ ನಾಮಿನೇಷನ್ ಪಟ್ಟಿಯಲ್ಲಿ ಭಾರತೀಯ ಚಿತ್ರರಂಗ ಹಾಗೂ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಲಾಗಿದ್ದು, ಚಿತ್ರರಂಗದ ನಟರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಆಗಸ್ಟ್ 13 ರಿಂದ ಆಗಸ್ಟ್ 23 ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಹೊಸ ಚಿತ್ರಗಳ ಪ್ರೀಮಿಯರ್ ಪ್ರದರ್ಶನಗಳು, ಸಿನಿಮಾ ತಜ್ಞರ ಚರ್ಚೆಗಳು ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಗಳು ಜರುಗಲಿವೆ.

ಅತ್ಯುತ್ತಮ ನಟ ಪ್ರಶಸ್ತಿಯ ರೇಸ್‌ನಲ್ಲಿ ರಿಷಬ್ ಶೆಟ್ಟಿ, ಆಮಿರ್ ಖಾನ್ ಮತ್ತು ಮಮ್ಮುಟ್ಟಿ!

ಈ ಬಾರಿಯ ಅತ್ಯುತ್ತಮ ನಟ ವಿಭಾಗದಲ್ಲಿ ತಾರಾಬಳಗವೇ ನಾಮಿನೇಟ್ ಆಗಿದೆ. ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ‘ಸಿತಾರೆ ಜಮೀನ್ ಪರ್’ ಚಿತ್ರಕ್ಕಾಗಿ ನಾಮಿನೇಟ್ ಆಗಿದ್ದರೆ, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ‘ಕಲಂ ಕಾವಲ್’ ಚಿತ್ರದ ನಟನೆಗಾಗಿ ಸ್ಥಾನ ಪಡೆದಿದ್ದಾರೆ. ಇವರ ಜತೆಗೆ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಅದ್ಭುತ ಪ್ರದರ್ಶನಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಉಳಿದಂತೆ ಈ ವಿಭಾಗದಲ್ಲಿ ಅಹಾನ್ ಪಾಂಡೆ, ಭೂಮನ್ ಭಾರ್ಗವ್ ದಾಸ್, ದುಲ್ಕರ್ ಸಲ್ಮಾನ್, ರಣವೀರ್ ಸಿಂಗ್ ಮತ್ತು ಸಂಜಯ್ ಮಿಶ್ರಾ ನಾಮಿನೇಟ್ ಆಗಿದ್ದಾರೆ.

ನಿರ್ದೇಶಕ ಮತ್ತು ಅತ್ಯುತ್ತಮ ಚಿತ್ರ ವಿಭಾಗದಲ್ಲೂ ‘ಕಾಂತಾರ’ ಹವಾ!

ವಿಶೇಷವೆಂದರೆ ರಿಷಬ್ ಶೆಟ್ಟಿ ಈ ಬಾರಿ ನಟನೆಯಷ್ಟೇ ಅಲ್ಲದೆ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲೂ ನಾಮಿನೇಷನ್ ಪಡೆದುಕೊಂಡಿದ್ದಾರೆ. ಇವರ ಜತೆಗೆ ಅಶ್ವಿನ್ ಅಯ್ಯರ್ ತಿವಾರಿ, ಮೋಹಿತ್ ಸೂರಿ ಮತ್ತು ರೀಮಾ ದಾಸ್ ರೇಸ್‌ನಲ್ಲಿದ್ದಾರೆ.

ಅತ್ಯುತ್ತಮ ಚಿತ್ರ ವಿಭಾಗದಲ್ಲೂ ‘ಕಾಂತಾರ: ಚಾಪ್ಟರ್ 1’ ಪ್ರಮುಖ ಕಂಟೆಂಡರ್ ಆಗಿ ಹೊರಹೊಮ್ಮಿದ್ದು, ಇದರ ಜತೆಗೆ ‘ಹಕ್’, ‘ಜರನ್’, ‘ಸಿತಾರೆ ಜಮೀನ್ ಪರ್’ ಸೇರಿದಂತೆ ಪ್ರಮುಖ ಪ್ರಾದೇಶಿಕ ಚಿತ್ರಗಳು ಸ್ಪರ್ಧಿಸುತ್ತಿವೆ.

ಇದನ್ನೂ ಓದಿ:

ಅತ್ಯುತ್ತಮ ನಟಿ

ಅನೀತ್ ಪಡ್ಡಾ, ಕಲ್ಯಾಣಿ ಪ್ರಿಯದರ್ಶನ್, ಕೀರ್ತಿ ಕುಲ್ಹಾರಿ, ನೀನಾ ಗುಪ್ತಾ, ರಾಣಿ ಮುಖರ್ಜಿ ಮತ್ತು ಯಾಮಿ ಗೌತಮ್ ಧರ್ ನಾಮಿನೇಟ್ ಆಗಿದ್ದಾರೆ.

ಅತ್ಯುತ್ತಮ ಒಟಿಟಿ ಸರಣಿ

‘ಕೋಹ್ರಾ: ಸೀಸನ್ 2’, ‘ಮಟ್ಕಾ ಕಿಂಗ್’, ‘ಫ್ರೀಡಂ ಅಟ್ ಮಿಡ್‌ನೈಟ್: ಸೀಸನ್ 2’ ಮತ್ತು ‘ಸಪ್ನೇ ವರ್ಸಸ್ ಎವ್ರಿಒನ್’ ನಾಮಿನೇಷನ್ ಪಡೆದಿವೆ.

ಈ ಬಾರಿಯ ಐಎಫ್‌ಎಫ್‌ಎಮ್ ನಾಮಿನೇಷನ್‌ಗಳು ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಬೆಂಗಾಲಿ ಸೇರಿದಂತೆ ಭಾರತೀಯ ಬಹುಭಾಷಾ ಸಂಸ್ಕೃತಿಯ ಕಥೆಗಳನ್ನು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !