ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ಕೊನೆಗೂ ವಾಪಾಸ್ ಪಡೆದಿದೆ. ಈ ನಿರ್ಧಾರವು ಜನರ ತೀವ್ರ ಪ್ರತಿಭಟನೆ ಮತ್ತು ದೇಶದಾದ್ಯಂತ ಉಂಟಾದ ಹಿಂಸಾಚಾರದ ಬೆನ್ನಲ್ಲೇ ಹೊರಬಂದಿದೆ.
ಕೆಲ ದಿನಗಳ ಹಿಂದೆ ನೇಪಾಳ ಸರ್ಕಾರವು ಸಾಮಾಜಿಕ ಜಾಲತಾಣಗಳನ್ನು ದೇಶದಲ್ಲಿ ಕಾರ್ಯನಿರ್ವಹಿಸಲು ನೋಂದಣಿ ಕಡ್ಡಾಯವೆಂದು ಘೋಷಿಸಿತ್ತು. ಆದರೆ ಯಾವುದೇ ಸಂಸ್ಥೆಗಳು ನೋಂದಣಿಯಾಗದೇ ಇರುವುದರಿಂದ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಈ ಕ್ರಮ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಬೃಹತ್ ಪ್ರತಿಭಟನೆಗಳಿಗೆ ದಾರಿ ಮಾಡಿಕೊಟ್ಟಿತು. ಹಿಂಸಾತ್ಮಕ ಪ್ರತಿಭಟನೆಗಳಲ್ಲಿ 19 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸಮಾಜದಲ್ಲಿ ತೀವ್ರ ಅಶಾಂತಿ ಉಂಟಾದ ಹಿನ್ನೆಲೆಯಲ್ಲಿ ಸಚಿವ ಸಂಪುಟ ತುರ್ತು ಸಭೆ ನಡೆಸಿ ನಿಷೇಧವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತು. ಈ ಕುರಿತು ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಘೋಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದೆಂದು ಭರವಸೆ ನೀಡಿದ್ದಾರೆ.

                                    