ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರ ದೇಣಿಗೆ ವಿಚಾರವಾಗಿ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್ ಯಾದವ್ ನೇತೃತ್ವದ ಹಿಂದಿನ ಸರ್ಕಾರವು ಧಾರ್ಮಿಕ ಕೇಂದ್ರಗಳ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿತ್ತು ಎಂದು ಅವರು ನೇರ ಆರೋಪ ಮಾಡಿದ್ದಾರೆ.
ಮಸೀದಿ ನಿರ್ಮಾಣಕ್ಕೆ ದೇವಾಲಯದ ಹಣ?
ತಮ್ಮ ಆಡಳಿತಾವಧಿಯಲ್ಲಿ ಸಮಾಜವಾದಿ ಪಕ್ಷವು ಹಿಂದೂ ದೇವಾಲಯಗಳನ್ನು ಬಲವಂತವಾಗಿ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುತ್ತಿತ್ತು ಎಂದು ಯೋಗಿ ದೂರಿದ್ದಾರೆ. ಅಷ್ಟೇ ಅಲ್ಲದೆ, ಭಕ್ತಾದಿಗಳು ಶ್ರದ್ಧೆಯಿಂದ ನೀಡುತ್ತಿದ್ದ ದೇವಾಲಯದ ದೇಣಿಗೆಯ ಹಣವನ್ನು ಮಸೀದಿಗಳ ಗೋಡೆಗಳನ್ನು ನಿರ್ಮಿಸಲು ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಸಿಎಂ ಮಾಡಿದ್ದಾರೆ. ಈ ಪಕ್ಷಗಳು ಸದಾ ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಾ, ಅಯೋಧ್ಯೆಯ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.
ಹನುಮಂಗಡಿ ನಮಾಜ್ ವಿವಾದದ ನೆನಪು
ಇದೇ ವೇಳೆ 2003ರ ಮುಲಾಯಂ ಸಿಂಗ್ ಯಾದವ್ ಸರ್ಕಾರದ ಅವಧಿಯ ಘಟನೆಯನ್ನು ಯೋಗಿ ನೆನಪಿಸಿದರು. ಆಗಿನ ಸರ್ಕಾರವು ರಂಜಾನ್ ಪ್ರಾರ್ಥನೆ ಹಾಗೂ ಇಫ್ತಾರ್ ಕೂಟವನ್ನು ಐತಿಹಾಸಿಕ ಹನುಮಂಗಡಿ ದೇವಾಲಯದ ಮೆಟ್ಟಿಲುಗಳ ಮೇಲೆಯೇ ಆಯೋಜಿಸಲು ಮತ್ತು ಅಲ್ಲಿ ನಮಾಜ್ ಮಾಡಲು ಮುಸ್ಲಿಮರಿಗೆ ಪ್ರಚೋದನೆ ನೀಡಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂದು ಧರ್ಮದ ಬಗ್ಗೆ ದೊಡ್ಡದಾಗಿ ಮಾತನಾಡುವವರ ಅಸಲಿ ಮುಖವಾಡ ಇದು ಎಂದು ಯೋಗಿ ಟೀಕಿಸಿದ್ದಾರೆ.



