ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಸೇರಿಸುವ ಪ್ರಸ್ತಾವನೆಗೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ದಸರಾದ ಮೂಲ ಪರಂಪರೆಯನ್ನು ಬದಲಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಸರಾ ತನ್ನದೇ ಆದ ಸಂಪ್ರದಾಯ
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈಸೂರು ದಸರಾ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿದ್ದು, ಅದಕ್ಕೆ ಹೊಸ ಆಚರಣೆಗಳನ್ನು ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದಸರಾದ ಪಾರಂಪರಿಕ ಸ್ವರೂಪವನ್ನು ಹಾಗೆಯೇ ಉಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಕಂಬಳ ಕರಾವಳಿಯ ಹೆಮ್ಮೆ
ಕಂಬಳವು ಕರಾವಳಿ ಭಾಗದ ಸಂಸ್ಕೃತಿ, ನಂಬಿಕೆ ಮತ್ತು ಭೌಗೋಳಿಕ ಹಿನ್ನೆಲೆಗೆ ಸಂಬಂಧಿಸಿದ ವಿಶಿಷ್ಟ ಆಚರಣೆಯಾಗಿದೆ. ಅದರ ಮೂಲ ಸ್ವರೂಪವನ್ನು ಉಳಿಸಲು ಅದನ್ನು ಕರಾವಳಿ ಭಾಗದಲ್ಲೇ ನಡೆಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.
ಸರ್ಕಾರಕ್ಕೆ ಮನವಿ
ವಿಜಯೇಂದ್ರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮೈಸೂರು ಹಾಗೂ ಕರಾವಳಿ ಎರಡೂ ಭಾಗಗಳ ಸಾಂಸ್ಕೃತಿಕ ಭಾವನೆಗಳಿಗೆ ಗೌರವ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕರಾವಳಿಯಲ್ಲಿ ಕಂಬಳವನ್ನು ಇನ್ನಷ್ಟು ಅದ್ದೂರಿಯಾಗಿ ಆಯೋಜಿಸಲು ಸಂಪೂರ್ಣ ಬೆಂಬಲವಿದೆ, ಆದರೆ ಅದನ್ನು ದಸರಾ ಉತ್ಸವದ ಭಾಗವನ್ನಾಗಿಸಬಾರದು ಎಂದು ಒತ್ತಾಯಿಸಿದ್ದಾರೆ.



