ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಅಶಾಂತಿ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಸ್ಫೋಟಗೊಂಡಿವೆ. ಜನರ ಒತ್ತಡ, ರಾಜಕೀಯ ವಿರೋಧ ಮತ್ತು ಸೇನೆಯ ಎಚ್ಚರಿಕೆ ಎಲ್ಲ ಒಂದಾಗಿದ್ದು ಕೊನೆಗೂ ಪ್ರಧಾನಿ ಕೆಪಿ ಶರ್ಮಾ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿದೆ. ದೇಶದಲ್ಲಿ ಸ್ಥಿರತೆ ಕಳೆದುಕೊಂಡ ಪರಿಸ್ಥಿತಿ, ಹೆಚ್ಚುತ್ತಿರುವ ಹಿಂಸೆ ಮತ್ತು ಸಾರ್ವಜನಿಕ ಅಸಮಾಧಾನವೇ ಈ ನಿರ್ಧಾರಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಸೇನಾ ಮುಖ್ಯಸ್ಥರು ಸ್ವತಃ ಪ್ರಧಾನಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಪ್ರತಿಭಟನಾಕಾರರು ಕೂಡ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ಓಲಿ ದೇಶ ಬಿಟ್ಟು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಹಲವಾರು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಸಿದ್ಧಪಡಿಸಲಾಗಿತ್ತು ಎಂಬ ವರದಿಗಳು ಬೆಳಕಿಗೆ ಬಂದಿದ್ದವು.
ಸೆಪ್ಟೆಂಬರ್ 4 ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ನಿಷೇಧಿಸಿತ್ತು. ಸರ್ಕಾರದ ಈ ನಿರ್ಧಾರ ಖಂಡಿಸಿ ಜೆನ್ ಝಡ್ ನೇತೃತ್ವದ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಪ್ರತಿಭಟನೆ ಬೆನ್ನಲ್ಲೇ ಸರ್ಕಾರ ನಿಷೇಧ ಹಿಂತೆಗೆದುಕೊಂಡಿತ್ತು. ಈ ವೇಳೆಗಾಗಲೇ ಪ್ರತಿಭಟನೆ ರಾಜಕೀಯ ಮತ್ತು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು.
ಈ ಬೆಳವಣಿಗೆಗಳು ನೇಪಾಳದ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಯಾವ ನಾಯಕತ್ವ ದೇಶವನ್ನು ಮುನ್ನಡೆಸುತ್ತದೆ ಮತ್ತು ಜನರ ಅಸಮಾಧಾನವನ್ನು ಶಮನಗೊಳಿಸುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಸ್ಥಿರತೆ ಮತ್ತು ಸಮಾಧಾನವನ್ನು ಮರಳಿ ತರಲು ಹೊಸ ಸರ್ಕಾರದ ಮೇಲೆ ಭಾರೀ ಜವಾಬ್ದಾರಿ ಎದುರಾಗಿದೆ.