ಹೊಸದಿಗಂತ ಡಿಜಿಟಲ್ ಡೆಸ್ಕ್:
ನವವಿವಾಹಿತೆಯೊಬ್ಬರು ಗಂಡನ ಮನೆಯವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಮೂಲದ ಶ್ವೇತಾ (25) ಮೃತ ದುರ್ದೈವಿ. ನಾಲ್ಕು ತಿಂಗಳ ಹಿಂದಷ್ಟೇ ಯುವಕನೊಬ್ಬನನ್ನು ಪ್ರೀತಿಸಿ ಶ್ವೇತಾ ಮದುವೆಯಾಗಿದ್ದರು.
ಮನೆಯವರ ಕಿರುಕುಳದಿಂದ ಬೇಸತ್ತು ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಶ್ವೇತಾ ನೇಣು ಬಿಗಿದುಕೊಂಡ ಜಾಗದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ. ಪತಿ ಹಾಗೂ ಅವನ ಅಕ್ಕನೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ.
ಅಮ್ಮ, ನನ್ನ ಸಾವಿಗೆ ಗಂಡ ಹಾಗೂ ನಾದಿನಿ ಕಾರಣ. ನನಗೆ ತುಂಬಾ ಹಿಂಸೆ ನೀಡಿದ್ದಾರೆ. ಬದುಕಲು ಆಸೆಯೇ ಇಲ್ಲ ಎನ್ನುವ ರೀತಿ ಮಾಡಿದ್ದಾರೆ. ನನ್ನ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡಬೇಡ. ನನ್ನಿಂದ ತಪ್ಪಾಗಿದೆ ಕ್ಷಮಿಸು ಅಮ್ಮಾ ಎಂದು ಬರೆದಿದ್ದಾರೆ.
ಈ ಪತ್ರ ಓದಿದ ತಾಯಿ ಹೃದಯ ಕಲಸಿಹೋದಂತಾಗಿದೆ. ಮಗಳಿಗೆ ಜೀವನದ ಮೇಲೆ ಆಸೆ ಹೋಗುವಂತೆ ಮಾಡಿರುವ ಪಾಪಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ನೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



