July 14, 2026
Tuesday, July 14, 2026
spot_img

ಮಧುಗಿರಿ, ಶಿರಾ, ಪಾವಗಡ ಜನರಿಗೆ ಗುಡ್‌ ನ್ಯೂಸ್: 2027ಕ್ಕೆ ಓಡಲಿದೆ ದಶಕಗಳ ಕನಸಿನ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರು ಜಿಲ್ಲೆಯ ಗಡಿಭಾಗದ ಜನರ ದಶಕಗಳ ರೈಲು ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ತುಮಕೂರು-ದಾವಣಗೆರೆ ಹಾಗೂ ತುಮಕೂರು-ಕಲ್ಯಾಣದುರ್ಗ ನಡುವಿನ ನೂತನ ರೈಲು ಮಾರ್ಗಗಳ ಕಾಮಗಾರಿಗಳು ರಾಕೆಟ್ ವೇಗದಲ್ಲಿ ಸಾಗುತ್ತಿದ್ದು, 2027ರ ಡಿಸೆಂಬರ್ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿವೆ.

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಂದಾಗಿ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಯ ಅಡಚಣೆಯಿಂದ ನೆನೆಗುದಿಗೆ ಬಿದ್ದಿದ್ದ ಈ ಬೃಹತ್ ಯೋಜನೆಗಳಿಗೆ ಈಗ ಹೊಸ ಚೈತನ್ಯ ಸಿಕ್ಕಿದೆ.

ಪಾವಗಡ-ಮಧುಗಿರಿ ಮಾರ್ಗದ ಪ್ರಗತಿ

ತುಮಕೂರು-ಕಲ್ಯಾಣದುರ್ಗ ಯೋಜನೆಯಡಿ ರಾಯದುರ್ಗದಿಂದ ಪಾವಗಡ ಪಟ್ಟಣದವರೆಗಿನ ಹಳಿ ಜೋಡಣೆ ಯಶಸ್ವಿಯಾಗಿ ಮುಗಿದಿದೆ. ಇತ್ತ ತುಮಕೂರಿನಿಂದ ಊರುಕೆರೆ ಜಂಕ್ಷನ್‌ವರೆಗಿನ ಕೆಲಸವೂ ಮುಕ್ತಾಯಗೊಂಡಿದೆ. ಸದ್ಯ ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ತುಮಕೂರು ನಡುವಿನ ಸಂಪರ್ಕ ಕಾಮಗಾರಿಗಳು ಅತ್ಯಂತ ತ್ವರಿತವಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೇ ಮಧುಗಿರಿ ರೈಲ್ವೆ ನಿಲ್ದಾಣದ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಸಚಿವ ಕೆ.ಎನ್. ರಾಜಣ್ಣ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಶಿರಾ ಭಾಗದಲ್ಲಿ ಹಳಿ ಜೋಡಣೆ ಮುಕ್ತಾಯ

ಮತ್ತೊಂದೆಡೆ, ದಾವಣಗೆರೆ-ತುಮಕೂರು ನೇರ ರೈಲು ಮಾರ್ಗದ ಕೆಲಸಗಳು ಭರದಿಂದ ಸಾಗುತ್ತಿದ್ದು, ತುಮಕೂರು ಮತ್ತು ಶಿರಾ ನಡುವಿನ ಹಳಿ ಜೋಡಣೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಇನ್ನುಳಿದ ಭಾಗಗಳಲ್ಲೂ ಕಾಮಗಾರಿ ಚುರುಕುಗೊಂಡಿದೆ.

2027ರ ಗಡುವು: ಮೋದಿ ಚಾಲನೆ

“2027ರ ಡಿಸೆಂಬರ್ ಒಳಗೆ ಈ ಎರಡೂ ಮಾರ್ಗಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಗಡುವು ನೀಡಲಾಗಿದೆ. ಕಾಮಗಾರಿ ಮುಗಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದಲೇ ಈ ಐತಿಹಾಸಿಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುವುದು,” ಎಂದು ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !