July 14, 2026
Tuesday, July 14, 2026
spot_img

RCB ವಿಜಯೋತ್ಸವದ ಭದ್ರತಾ ಲೋಪ ಕೇಸ್: ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆರ್​ಸಿಬಿ (RCB) ವಿಜಯೋತ್ಸವದ ವೇಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಧಿಕಾರಿಗಳ ವಿರುದ್ಧ ಬಾಕಿ ಇದ್ದ ಇಲಾಖಾ ತನಿಖೆಯನ್ನು ಅಧಿಕೃತವಾಗಿ ಕೈಬಿಟ್ಟು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಭದ್ರತಾ ಲೋಪದ ಆರೋಪ ಎದುರಿಸುತ್ತಿದ್ದ ಮೂವರು ಹಿರಿಯ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ಅಮಾನತು ಹಿಂಪಡೆದಿದ್ದ ಸರ್ಕಾರ:

ಕಾಲ್ತುಳಿತ ಘಟನೆ ನಡೆದ ತಕ್ಷಣವೇ ಭದ್ರತಾ ಲೋಪದ ಹೊಣೆ ಹೊರಿಸಿ ಸರ್ಕಾರ, ಬಿ. ದಯಾನಂದ್, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಎಚ್. ತೆಕ್ಕಣ್ಣವರ್ ಈ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೆ, ತದನಂತರದ ದಿನಗಳಲ್ಲಿ ಅಮಾನತು ಆದೇಶವನ್ನು ಹಿಂಪಡೆದು, ಕೇವಲ ಇಲಾಖಾ ತನಿಖೆಗೆ ಒಳಪಡಿಸಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

ಅಧಿಕಾರಿಗಳ ಲಿಖಿತ ಸ್ಪಷ್ಟನೆ:

ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ಅಧಿಕಾರಿಗಳು, ಘಟನೆಗೆ ತಾವು ನೇರವಾಗಿ ಹೊಣೆಗಾರರಲ್ಲ ಎಂದು ಸುದೀರ್ಘ ಲಿಖಿತ ಹಾಗೂ ಮೌಖಿಕ ವಿವರಣೆಯನ್ನು ನೀಡಿದ್ದರು. ಕ್ರೀಡಾಂಗಣದ ಬಳಿ ತಾವು ನಿರ್ವಹಿಸಿದ ಕರ್ತವ್ಯದ ಸಂಪೂರ್ಣ ದಾಖಲೆಗಳನ್ನು ಸಮರ್ಥನೆಯೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದರು. ಅಧಿಕಾರಿಗಳು ನೀಡಿದ ವಿವರಣೆ, ಸಲ್ಲಿಸಿದ ಪ್ರಮುಖ ದಾಖಲೆಗಳು ಹಾಗೂ ಅವರ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರದ ಸಮರ್ಥ ಪ್ರಾಧಿಕಾರವು, ಇಲಾಖಾ ತನಿಖೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದು ತನಿಖೆಯನ್ನು ಅಧಿಕೃತವಾಗಿ ವಜಾಗೊಳಿಸಿದೆ.

ಇದನ್ನೂ ಓದಿ;

ಈ ಆದೇಶದೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೇಲಿದ್ದ ಸುದೀರ್ಘ ಕಾನೂನು ಪ್ರಕ್ರಿಯೆಯ ತೂಗುಗತ್ತಿ ಸಂಪೂರ್ಣವಾಗಿ ನಿವಾರಣೆಯಾದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !