ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಎಥೆನಾಲ್ ಮಿಶ್ರಿತ ಇಂಧನ ನೀತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಷ್ ಕಶ್ಯಪ್ ಸೇರಿ ನಾಲ್ವರು ಇನ್ಫ್ಲುಯೆನ್ಸರ್ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮನೀಶ್ ಕಶ್ಯಪ್ ಹೊರತುಪಡಿಸಿ, ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳೆಂದರೆ ‘ದೇಸಿ ಬಾಯ್ಸ್ ಎನ್ಸಿಆರ್’, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ. ಪೊಲೀಸ್ ಮೂಲಗಳ ಪ್ರಕಾರ, ಈ ನಾಲ್ವರು ಇನ್ಫ್ಲುಯೆನ್ಸರ್ಗಳು ಕೇವಲ ವ್ಯೂಸ್ ಮತ್ತು ಫಾಲೋವರ್ಸ್ಗಳನ್ನು ಗಳಿಸುವ ಏಕೈಕ ಸ್ವಾರ್ಥ ಉದ್ದೇಶದಿಂದ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ವಿವಾದಾತ್ಮಕ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದರು.
ಸರ್ಕಾರದ ಎಥೆನಾಲ್ ನೀತಿಯ ನೆಪದಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ಹಗರಣ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ಇವರು ವೀಡಿಯೊಗಳಲ್ಲಿ ಪ್ರತಿಪಾದಿಸಿದ್ದರು.ತಮ್ಮ ಸುಳ್ಳು ವೀಡಿಯೊಗಳಿಗೆ ಸಾರ್ವಜನಿಕ ನಂಬಿಕೆ ಸಿಗಲಿ ಎಂಬ ಕಾರಣಕ್ಕೆ, ಇವರು ಸಾಮಾನ್ಯ ನಾಗರಿಕರೊಂದಿಗೆ ನಕಲಿ ಹಾಗೂ ದಾರಿತಪ್ಪಿಸುವ ಸಂದರ್ಶನಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದರು. ಈ ಮೂಲಕ ನಿತಿನ್ ಗಡ್ಕರಿ ಅವರ ರಾಜಕೀಯ ಮತ್ತು ಸಾಮಾಜಿಕ ಖ್ಯಾತಿಗೆ ಕಳಂಕ ತರಲು ಪ್ರಯತ್ನಿಸಿದ್ದರು.



