July 15, 2026
Wednesday, July 15, 2026
spot_img

ಒಮಾನ್ ಕಡಲಿನಲ್ಲಿ ಭೀಕರ ಕ್ಷಿಪಣಿ ದಾಳಿ: ಸಾವಿನ ದವಡೆಯಿಂದ ಪಾರಾದ ಕರಾವಳಿ ಯುವಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಲಿ ಪ್ರದೇಶದ ಜಲವಲಯದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ಒಮಾನ್ ಸಮುದ್ರ ತೀರದಲ್ಲಿ ಇರಾನ್ ಮಿಲಿಟರಿ ಪಡೆಗಳು ನಡೆಸಿದ ಭೀಕರ ರಾಕೆಟ್ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಯುವಕರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಾರ್ಗೆಟ್ ಆದ ‘ಜೆಎಫ್ ಎಸ್ ಗ್ಯಾಲಕ್ಸಿ’ ಹಡಗು

ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಯುಎಇ ಬಂದರಿನತ್ತ ಸಾಗುತ್ತಿದ್ದ ‘ಜೆಎಫ್ ಎಸ್ ಗ್ಯಾಲಕ್ಸಿ’ ಎಂಬ ಗೂಡ್ಸ್ ಹಡಗನ್ನು ಗುರಿಯಾಗಿಸಿ ಇರಾನ್ ಪಡೆಗಳು ದಾಳಿ ನಡೆಸಿವೆ. ಹಡಗಿನ ಚಲನೆಯನ್ನು ನಿಲ್ಲಿಸುವ ಉದ್ದೇಶದಿಂದ ನೇರವಾಗಿ ಎಂಜಿನ್ ಕೋಣೆಯ ಮೇಲೆಯೇ ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಇದರ ಪರಿಣಾಮವಾಗಿ ಇಡೀ ಎಂಜಿನ್ ರೂಮ್ ಹೊತ್ತಿ ಉರಿಯತೊಡಗಿತು. ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ನಿವಾಸಿಯಾದ ರಚನ್ ಪೂಜಾರಿ ಕಳೆದ ಕೆಲವು ವರ್ಷಗಳಿಂದ ಇದೇ ಮರ್ಚೆಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಸಮಯಪ್ರಜ್ಞೆ ಮೆರೆದ ಭಾರತೀಯ ಸಿಬ್ಬಂದಿ

ಬೆಂಕಿ ತೀವ್ರವಾಗಿ ವ್ಯಾಪಿಸಿದಾಗ ಗಾಬರಿಯಾಗದ ರಚನ್ ಪೂಜಾರಿ ಸೇರಿದಂತೆ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ತಕ್ಷಣವೇ ಲೈಫ್ ಬೋಟ್ (ಜೀವ ರಕ್ಷಕ ದೋಣಿ) ಮೂಲಕ ಹಡಗಿನಿಂದ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಒಮಾನ್ ನೌಕಾಪಡೆಯು ಸೈನಿಕ ನೆಲೆಗೆ ಇವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.

ಸದ್ಯ ಇವರೆಲ್ಲರೂ ಹಡಗು ಕಂಪನಿಯ ಉಸ್ತುವಾರಿಯಲ್ಲಿ ಒಮಾನ್‌ನಲ್ಲೇ ಸುರಕ್ಷಿತವಾಗಿದ್ದು, ರಚನ್ ಪೂಜಾರಿ ಪಾರಾದ ಸುದ್ದಿ ತಿಳಿದು ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !