ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಕುಡಿಯುವ ನೀರನ್ನು ಮಾತ್ರ ಮೀಸಲಿಡುವಂತೆ ಆದೇಶಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳುನಾಡು ಹೆಚ್ಚಿನ ನೀರಿಗಾಗಿ ಪಟ್ಟು ಹಿಡಿದಿದ್ದರೂ, ನಮ್ಮ ರಾಜ್ಯದ ಕಾನೂನು ತಜ್ಞರು ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ನಿಜವಾದ ಜಲಕ್ಷಾಮದ ಪರಿಸ್ಥಿತಿಯನ್ನು ಬೋರ್ಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಡಲ್ಲ
“ನೆರೆ ರಾಜ್ಯಕ್ಕೆ ಹೆಚ್ಚುವರಿ ನೀರು ಹರಿಸಲು ಸದ್ಯಕ್ಕೆ ನಮ್ಮ ಬಳಿ ನೀರಿಲ್ಲ. ತಮಿಳುನಾಡಿಗೆ ತಕ್ಷಣ ನೀರು ಹರಿಸುವಂತೆ ಬೋರ್ಡ್ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ನೀರು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ ಕೇವಲ 3 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಹರಿದಿದ್ದು, ಇದಕ್ಕೆ ಬಿಳಿಗುಂಡ್ಲುವಿನ ಮಾಪನ ಕೇಂದ್ರದ ದಾಖಲೆಗಳೇ ಸಾಕ್ಷಿ ಎಂದು ಅವರು ವಿರೋಧಿಗಳ ಆರೋಪಕ್ಕೆ ತಿರುಗೇಟು ನೀಡಿದರು.
ಮಂಡ್ಯ ರೈತರ ಹಿತರಕ್ಷಣೆಗೆ ಬದ್ಧ
ಮಂಡ್ಯ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಕುರಿತು ಪ್ರತಿಕ್ರಿಯಿಸಿದ ಸಚಿವರು, CWRC ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡಲು ಹೇಳಿದೆ. ಆದಾಗ್ಯೂ, ರೈತರಿಗೆ ನೀರು ಬಿಡುವ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.



