ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ಕ್ಷಣ ಸಾಕ್ಷಿಯಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಕಕ್ಷಾ ಉಡಾವಣಾ ರಾಕೆಟ್ ‘ವಿಕ್ರಮ್-1’ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲು ತಯಾರಾಗುತ್ತಿದೆ.
‘ಮಿಷನ್ ಆಗಮನ’ ಹೆಸರಿನ ಈ ಉಡಾವಣೆಯು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿದೆ. ಉಪಗ್ರಹಗಳನ್ನು ತ್ವರಿತವಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಈ ರಾಕೆಟ್ ಹೊಂದಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ “ಹೊಸ ಐತಿಹಾಸಿಕ ಅಧ್ಯಾಯ” ಎಂದು ಬಣ್ಣಿಸಿದ್ದಾರೆ. ಯುವಕರ ಪ್ರತಿಭೆ, ನವೋದ್ಯಮ ಮತ್ತು ಆತ್ಮವಿಶ್ವಾಸಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಉಡಾವಣೆಯ ವಿಶೇಷವೆಂದರೆ, ಪ್ರಧಾನಿ ಮೋದಿ ಅವರ “ವಂದೇ ಮಾತರಂ” ಸಂದೇಶವಿರುವ ಕಾರ್ಡ್ ಸೇರಿದಂತೆ ಭಾರತ ಮತ್ತು ವಿಶ್ವದ ವಿವಿಧ ಭಾಗಗಳ ಜನರು ಬರೆದ ಶುಭಾಶಯ ಸಂದೇಶಗಳನ್ನೂ ವಿಕ್ರಮ್-1 ಬಾಹ್ಯಾಕಾಶಕ್ಕೆ ಕಳಿಸಲಿದೆ. ಇದು ಭಾರತದ ಸಾರ್ವಜನಿಕ ಮತ್ತು ಖಾಸಗಿ ಬಾಹ್ಯಾಕಾಶ ಸಹಯೋಗದ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ.



