July 20, 2026
Monday, July 20, 2026
spot_img

ವೃದ್ಧೆಯರೇ ಟಾರ್ಗೆಟ್! ನಕಲಿ ಸರ ತೋರಿಸಿ ಅಸಲಿ ಚಿನ್ನ ಕಳವು: ಇಬ್ಬರು ಖದೀಮರು ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯೋವೃದ್ಧ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ನಕಲಿ ಬಂಗಾರದ ಸರದ ಆಮಿಷವೊಡ್ಡಿ ಅಸಲಿ ಚಿನ್ನಾಭರಣಗಳನ್ನು ವಂಚಿಸುತ್ತಿದ್ದ ಅಂತರ್-ಜಿಲ್ಲಾ ಖದೀಮರ ಜಾಲವನ್ನು ಭೇದಿಸುವಲ್ಲಿ ರಾಯಬಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 1.40 ಲಕ್ಷ ಮೌಲ್ಯದ ಬಂಗಾರದ ಬೋರಮಾಳ ಸರವನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 15ರಂದು ರಾಯಬಾಗ ಪಟ್ಟಣದ ಮುಧೋಳ ಆಸ್ಪತ್ರೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಾದೇವಿ ಎಂಬ ಮಹಿಳೆಯನ್ನು ಆರೋಪಿಗಳು ನಕಲಿ ಬಂಗಾರದ ಸರದ ಆಮಿಷವೊಡ್ಡಿ ವಂಚಿಸಿದ್ದಾರೆ. ಬಳಿಕ ಅವರ ಗಮನವನ್ನು ಬೇರೆಡೆ ಸೆಳೆದು, ಕೊರಳಲ್ಲಿದ್ದ ಅಸಲಿ ಬಂಗಾರದ ಬೋರಮಾಳ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 258/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ಅಥಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಜಿ. ಮುನ್ನೋಳಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು.

ರಾಯಬಾಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ. ಎಂ. ಡಫೀನ್, ಪಿಎಸ್ಐ ಶಿವಾನಂದ ಮನ್ನಿಕೇರಿ ಹಾಗೂ ಸಿಬ್ಬಂದಿಗಳಾದ ಬಿ. ಬಿ. ಬಡಿಗೇರ, ಎಸ್. ಎಸ್. ಅರಭಾವಿ, ಆರೀಫ್ ಮುದ್ದಾಳ, ಡಿ. ಟಿ. ಶಾನವಾಡ, ಅಜೀತ್ ನಾಯಿಕ, ಆರ್. ಎಸ್. ಪಿಂಜಾರ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್ನ ಸಚಿನ್ ಪಾಟೀಲ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತ ಆರೋಪಿಗಳನ್ನು ನಾಗಮ್ಮ ಕೋಂ ಗಿಡ್ಡಪ್ಪ (71), ಹಾಗೂ ಜೆ. ಪುಟ್ಟಪ್ಪ ತಂದೆ ಗಿಡ್ಡಪ್ಪ (39), ಇಬ್ಬರೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಬಂಧಿತರಿಂದ ವಂಚನೆ ಪ್ರಕರಣದಲ್ಲಿ ಕಳವಾಗಿದ್ದ 1,40,000 ಮೌಲ್ಯದ ಅಸಲಿ ಬಂಗಾರದ ಬೋರಮಾಳ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂತರ-ಜಿಲ್ಲಾ ಮಟ್ಟದಲ್ಲಿ ವಂಚನೆ ನಡೆಸುತ್ತಿದ್ದ ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿ ಮುದ್ದೆಮಾಲು ವಶಪಡಿಸಿಕೊಂಡ ರಾಯಬಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !