ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಹಾಗೂ ಹಠಾತ್ ಪ್ರವಾಹ ಸಂಭವಿಸಿ ಭಾರೀ ದುರಂತ ನಡೆದಿದೆ. ಮಕ್ಕಳು ಸೇರಿ 8 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇದುವರೆಗೆ ನಾಲ್ವರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.
ಮನೆಗಳು ಮಣ್ಣಿನಡಿ
ಭೂಕುಸಿತದ ರಭಸಕ್ಕೆ ಹಲವು ಮನೆಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ಸೇನೆ, ಎಸ್‌ಡಿಆರ್‌ಎಫ್, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:
ರಕ್ಷಣೆಗೆ ಮಳೆ ಅಡ್ಡಿ
ಭೂಕುಸಿತದ ಬಳಿಕ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ಮೋನ್ ಜೊತೆಗೆ ಮೊಕೊಕ್ಚುಂಗ್ ಜಿಲ್ಲೆಯ ತುಲಿ ಉಪವಿಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಬಂದ್ ಆಗಿ, ಮೂಲಸೌಕರ್ಯಕ್ಕೂ ಹಾನಿಯಾಗಿದೆ.
ಸರ್ಕಾರದಿಂದ ನೆರವು ಘೋಷಣೆ
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ₹74 ಸಾವಿರ ತುರ್ತು ನೆರವು ನೀಡುವುದಾಗಿ ಮುಖ್ಯಮಂತ್ರಿ ನೇಫಿಯು ರಿಯೊ ಘೋಷಿಸಿದ್ದಾರೆ. ಅಪಾಯದ ಪ್ರದೇಶಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಸರ್ಕಾರ ಎಚ್ಚರಿಕೆ ನೀಡಿದ್ದು, ಎಲ್ಲಾ ಇಲಾಖೆಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.



