ಹೊಸದಿಗಂತ ವರದಿ ಚಿತ್ರದುರ್ಗ
ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸೌಕರ್ಯದ ಕೊರತೆ, ಹಾಸ್ಟೆಲ್ ಸಮಸ್ಯೆಗಳು ಹಾಗೂ ಬಾಕಿ ಇರುವ ಸ್ಕಾಲರ್‌ಶಿಪ್ ವಿಳಂಬದಂತಹ ತೀವ್ರ ಶೈಕ್ಷಣಿಕ ಬಿಕ್ಕಟ್ಟುಗಳ ಎದುರಿಸಬೇಕಾದ ಅನಿವಾರ್ಯತೆ ಇದ್ದು, ರಾಜ್ಯದಲ್ಲಿ ಈ ಜವಾಬ್ದಾರಿ ನಿಭಾಯಿಸಲು ಶಿಕ್ಷಣ ಸಚಿವರು ಇಲ್ಲದಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಹಲವು ಭಾಗಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ತರಗತಿಗಳಿಗೆ ಸಕಾಲಕ್ಕೆ ತಲುಪಲಾಗದೆ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇಲಾಖೆಯ ಸಮನ್ವಯದ ಕೊರತೆಯಿಂದಾಗಿ ವಿದ್ಯಾರ್ಥಿ ಪಾಸ್ ವಿತರಣೆಯೂ ವಿಳಂಬವಾಗಿದ್ದು, ನಿತ್ಯ ಬಸ್ ಫುಟ್‌ಬೋರ್ಡ್ ಮೇಲೆ ಪ್ರಾಣದ ಹಂಗು ತೊರೆದು ಪ್ರಯಾಣಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಸರ್ಕಾರಿ ಹಾಸ್ಟೆಲ್‌ಗಳ ಪ್ರವೇಶಾತಿ ಪ್ರಕ್ರಿಯೆಯು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ದೂರದ ಊರುಗಳಿಂದ ಬಂದ ಬಡ ವಿದ್ಯಾರ್ಥಿಗಳು ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದ ಒಟ್ಟು ೪೩೨ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೩,೦೦೦ ಕಾಯಂ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಕೇವಲ ೩,೦೦೦ ಕಾಯಂ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದು ಒಟ್ಟು ಅಗತ್ಯದ ಕೇವಲ ಶೇಕಡಾ ೨೦% ರಷ್ಟಾಗಿದೆ. ಉಳಿದ ಶೇಕಡಾ ೮೦% ರಷ್ಟು ಬೋಧನಾ ವ್ಯವಸ್ಥೆಯು ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬಿತವಾಗಿದೆ. ಸದ್ಯಕ್ಕೆ ಕಾಲೇಜುಗಳ ನಿರ್ವಹಣೆಗೆ ೧೨,೦೦೦ ಅತಿಥಿ ಉಪನ್ಯಾಸಕರ ಅಗತ್ಯವಿದ್ದು, ಈ ಹುದ್ದೆಗಳಿಗೆ ೫೫,೦೦೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾದರೂ ನೇಮಕಾತಿ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಸರ್ಕಾರ ತಕ್ಷಣವೇ ಕೌನ್ಸಿಲಿಂಗ್ ನಡೆಸಿ ಆದೇಶ ನೀಡಬೇಕೆಂದು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ಕಳೆದ ಸಾಲಿನಿಂದಲೂ ಬಾಕಿ ಇರುವ ವಿದ್ಯಾಸಿರಿ ಸೇರಿದಂತೆ ವಿವಿಧ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು ಈವರೆಗೆ ಇಲಾಖೆಗಳಿಂದ ಬಿಡುಗಡೆಯಾಗಿಲ್ಲ. ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳ ನೆಪವೊಡ್ಡಿ ಇಲಾಖೆಗಳು ಕಾಲಹರಣ ಮಾಡುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹಾಗೂ ಪರೀಕ್ಷಾ ಸರಣಿಯ ವೆಚ್ಚಗಳನ್ನು ಭರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ಒಂದು ವಾರದೊಳಗೆ ಸಾರಿಗೆ, ವಸತಿ ಮತ್ತು ವಿದ್ಯಾರ್ಥಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಈ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಬಿಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ತರಗತಿಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಬಿವಿಪಿ ಪದಾಧಿಕಾರಿಗಳು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



