July 23, 2026
Thursday, July 23, 2026
spot_img

ಚಿಪ್ಸ್‌, ಬೋಂಡ, ಬಜ್ಜಿ ತಿನ್ನೋರು ಮಿಸ್‌ ಮಾಡದೇ ಓದಿ, ಬೆಂಗಳೂರಿನ 40ಕ್ಕೂ ಹೆಚ್ಚು ಕಡೆ ಅಸುರಕ್ಷಿತ ಎಣ್ಣೆ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಟೇಲ್‌, ಪಬ್‌, ಬಾರ್‌, ರಸ್ತೆ ಬದಿ ಅಂಗಡಿಗಳು ಹಾಗೂ ರೆಸ್ಟೋರೆಂಟ್‌ನಲ್ಲಿ ಗುಣಮಟ್ಟದ ಎಣ್ಣೆ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪದ ಮೇಲೆ ಆಹಾರ ಸುರಕ್ಷತಾ ಇಲಾಖೆ ತಪಾಸಣೆ ನಡೆಸಿದ್ದು, ಶಾಕಿಂಗ್‌ ಮಾಹಿತಿ ಲಭ್ಯವಾಗಿದೆ.

ನೀವು ತಿನ್ನುವ ಫ್ರೆಂಚ್‌ ಫ್ರೈಸ್‌, ಬರ್ಗರ್‌ ಪ್ಯಾಟಿ, ಪಕೋಡ, ವಡೆ, ಬೋಂಡ, ಬಜ್ಜಿ, ಚಿಪ್ಸ್‌, ಪೂರಿ, ಬನ್ಸ್‌ ಇದ್ಯಾವುದು ಕೂಡ ಸೇಫ್‌ ಇಲ್ಲ. ಆಹಾರ ಸುರಕ್ಷತಾ ಇಲಾಖೆ ಬೆಂಗಳೂರಿನ 40ಕ್ಕೂ ಹೆಚ್ಚು ಕಡೆ ಈಗಾಗಲೇ ಬಳಕೆ ಮಾಡಿರುವ ಕರಿದ ಎಣ್ಣೆಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಇವುಗಳ ಗುಣಮಟ್ಟ ಚೆನ್ನಾಗಿಲ್ಲ, ಇದರಲ್ಲಿ ಅಪಾಯಕಾರಿ ಟ್ರಾನ್ಸ್‌ ಫ್ಯಾಟ್‌ ಇರುವುದು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ವಿವಿಧ ಆಹಾರ ಮಳಿಗೆಗಳಿಂದ ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ಟ್ರಾನ್ಸ್ ಫ್ಯಾಟ್ ಇರುವ ಅಂಶ ಪತ್ತೆಯಾಗಿದೆ. ಇದರ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಒಟ್ಟು 28.91 ಲಕ್ಷ ರೂ. ದಂಡ ವಿಧಿಸಲಾಗಿದೆ.

ಈ ಟ್ರಾನ್ಸ್‌ ಫ್ಯಾಟ್‌ಗಳು ನಿಮ್ಮ ದೇಹಕ್ಕೆ ಸೇರಿದ ನಂತರ ಹೃದಯ ಸಂಬಂಧಿ ಕಾಯಿಲೆ, ಫ್ಯಾಟಿ ಲಿವರ್‌ ಹಾಗೂ ಇನ್ನಿತರ ಅಪಾಯಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತವೆ. ಹೋಟೆಲ್‌, ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳಿಗೆ ಬಳಸಿದ ಎಣ್ಣೆಯ ಮರುಬಳಕೆ ಹಾಗೂ ಗುಣಮಟ್ಟ ನಿಯಂತ್ರಣ ಕುರಿತು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಹಾಗೂ ಹೆಚ್ಚಿನ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಹೊಟೇಲ್‌ಗಳಲ್ಲಿ ಮಾರುತ್ತಾರೆ ಎಂದು ಧೈರ್ಯವಾಗಿ ತಿನ್ನುವ ಮುನ್ನ ಎಣ್ಣೆಯ ಬಳಕೆಯ ಬಗ್ಗೆ ಪ್ರಶ್ನೆ ಮಾಡಿ ತಿಳಿದುಕೊಂಡು ನಂತರ ಊಟ ಮಾಡುವುದು ಉತ್ತಮವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !