ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ಕಣಿವೆಯಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವ ಪರಿಣಾಮ ರಾಜ್ಯದ ಎರಡು ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳಾದ ಶಿವನಸಮುದ್ರ ಮತ್ತು ಶಿಂಷಾ ವಿದ್ಯುತ್ ಸ್ಥಾವರಗಳಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿರುವುದರಿಂದ ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.
ಈ ವರ್ಷ ಪೂರ್ವ ಮುಂಗಾರು ಮತ್ತು ನೈಋತ್ಯ ಮುಂಗಾರು ಎರಡೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಭಾಗದಲ್ಲಿ ಕಾವೇರಿ ನದಿಯ ಹರಿವು ತೀವ್ರವಾಗಿ ಕಡಿಮೆಯಾಗಿದೆ. ಪರಿಣಾಮವಾಗಿ ಜಲವಿದ್ಯುತ್ ಘಟಕಗಳಿಗೆ ಅಗತ್ಯವಿರುವಷ್ಟು ನೀರು ಲಭ್ಯವಾಗದೆ, ಜೂನ್ 6ರಿಂದಲೇ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಶಿವನಸಮುದ್ರ ಜಲವಿದ್ಯುತ್ ಯೋಜನೆ ದೇಶದ ವಿದ್ಯುತ್ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿದ್ದು, ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯೋಜನೆಯಲ್ಲಿ 10 ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ ಸುಮಾರು 367.92 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಆದರೆ ನೀರಿನ ಕೊರತೆಯಿಂದ ಎಲ್ಲಾ ಘಟಕಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಇದರ ಜೊತೆಗೆ ಶಿಂಷಾ ಜಲವಿದ್ಯುತ್ ಯೋಜನೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಎರಡು ಉತ್ಪಾದನಾ ಘಟಕಗಳಿದ್ದು, ವಾರ್ಷಿಕವಾಗಿ ಸುಮಾರು 150.67 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ಹರಿವು ಕಡಿಮೆಯಾಗಿರುವುದರಿಂದ ಈ ಕೇಂದ್ರದಲ್ಲೂ ಉತ್ಪಾದನೆ ನಿಂತಿದೆ. ಮೂಲಗಳ ಮಾಹಿತಿಯ ಪ್ರಕಾರ, ಒಂದು ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸುಮಾರು 35 ಕ್ಯೂಸೆಕ್ ನೀರು ಅಗತ್ಯವಿದೆ. ಶಿವನಸಮುದ್ರ ಯೋಜನೆಯ ಸಂಪೂರ್ಣ ಸಾಮರ್ಥ್ಯದಲ್ಲಿ ಸುಮಾರು 42 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ದಿನಕ್ಕೆ ಸುಮಾರು 1,400 ಕ್ಯೂಸೆಕ್ ನೀರಿನ ಹರಿವು ಬೇಕಾಗುತ್ತದೆ.
ಆದರೆ ಪ್ರಸ್ತುತ ಕಾವೇರಿ ನದಿಯಲ್ಲಿ ಅಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲ. ಮಳೆ ಕೊರತೆಯ ಪರಿಣಾಮ ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ ಮೇಲೆಯೂ ಒತ್ತಡ ಹೆಚ್ಚುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗದಿದ್ದರೆ ಶಿವನಸಮುದ್ರ ಹಾಗೂ ಶಿಂಷಾ ಜಲವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭವಾಗಲು ಇನ್ನಷ್ಟು ಸಮಯ ಬೇಕಾಗುವ ಸಾಧ್ಯತೆ ಇದೆ.



