ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ: ನಗರ ಪ್ರದೇಶದಲ್ಲಿ ನೊಂದಣಿ ಸಂಖ್ಯೆ ಇಲ್ಲದ ಹಾಗೂ ದೋಷಪೂರಿತ ನೊಂದಣಿ ಸಂಖ್ಯೆ (ಡಿಫೆಕ್ಟಿವ್ ನಂಬರ್ ಪ್ಲೇಟ್) ಹೊಂದಿರುವ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯ ವೇಳೆ ನೊಂದಣಿ ಸಂಖ್ಯೆ ಇಲ್ಲದ, ನೊಂದಣಿ ಸಂಖ್ಯೆಯನ್ನು ಮರೆಮಾಚಿದ ಹಾಗೂ ಮುಂದೆ ಅಥವಾ ಹಿಂದೆ ಯಾವುದಾದರೂ ಒಂದು ನೊಂದಣಿ ಫಲಕ ಇಲ್ಲದಂತೆ ಸಂಚರಿಸುತ್ತಿದ್ದ ಒಟ್ಟು 105 ದ್ವಿಚಕ್ರ ವಾಹನಗಳನ್ನು ತಡೆಹಿಡಿಯಲಾಯಿತು. ಬಳಿಕ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಲಾಯಿತು. ಜೊತೆಗೆ ವಾಹನ ಸವಾರರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿ, ನೊಂದಣಿ ಫಲಕಗಳನ್ನು ಅಳವಡಿಸಿದ ಬಳಿಕ ವಾಹನಗಳನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ:
ನಗರ ವ್ಯಾಪ್ತಿಯಲ್ಲಿ ದೋಷಪೂರಿತ ಅಥವಾ ನೊಂದಣಿ ಸಂಖ್ಯೆ ಇಲ್ಲದ ವಾಹನಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಎಲ್ಲ ವಾಹನ ಮಾಲೀಕರು ಹಾಗೂ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಾಹನಗಳಲ್ಲಿ ನಿಯಮಾನುಸಾರ ನೊಂದಣಿ ಫಲಕಗಳನ್ನು ಅಳವಡಿಸಿಕೊಂಡು ಸಂಚರಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.



