July 27, 2026
Monday, July 27, 2026
spot_img

ಕೋಝಿಕ್ಕೋಡ್‌ ತೈಲ ಮಿಲ್‌ನಲ್ಲಿ ಭೀಕರ ಅಗ್ನಿ ಅವಘಡ: ಕೋಟ್ಯಂತರ ಮೌಲ್ಯದ ಆಸ್ತಿ ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್ ಪ್ರದೇಶದಲ್ಲಿರುವ ಪ್ರಸಿದ್ಧ ‘ರೇಣುಕಾ ಆಯಿಲ್ ಆಂಡ್ ಫ್ಲೋರ್ ಮಿಲ್’ನಲ್ಲಿ ಭಾನುವಾರ (ಜುಲೈ 26) ಸಂಜೆ ಸಾಯಂಕಾಲ ತೀವ್ರ ಸ್ವರೂಪದ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಹಾಗೂ ಕಚ್ಚಾವಸ್ತುಗಳು ನಾಶವಾಗಿವೆ.

ಧಗಧಗನೆ ಉರಿದ ಎಣ್ಣೆ ಸಂಸ್ಕರಣಾ ಘಟಕ

ಮೊದಲು ತೆಂಗಿನೆಣ್ಣೆ ತಯಾರಿಸುವ ವಿಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿತು. ಕಾರ್ಖಾನೆಯಲ್ಲಿದ್ದ ಅಪಾರ ಪ್ರಮಾಣದ ಎಣ್ಣೆ ಹಾಗೂ ಕೊಬ್ಬರಿ ಹಿಂಡಿಗೆ ಬೆಂಕಿ ಶೀಘ್ರವಾಗಿ ವ್ಯಾಪಿಸಿದ್ದರಿಂದ ಅನಾಹುತದ ತೀವ್ರತೆ ಹೆಚ್ಚಾಯಿತು. ಅದೃಷ್ಟವಶಾತ್ ಭಾನುವಾರದ ರಜೆಯಿದ್ದ ಕಾರಣ ಯಾವುದೇ ಕಾರ್ಮಿಕರಿರಲಿಲ್ಲ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.

8 ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ

ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ಬರದಿದ್ದಾಗ ಕೋಝಿಕ್ಕೋಡ್‌ನಿಂದ 9 ಮತ್ತು ಮಲಪ್ಪುರಂ ಜಿಲ್ಲೆಯಿಂದ 1 ಸೇರಿದಂತೆ ಒಟ್ಟು 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಜ್ವಾಲೆಯನ್ನು ನಂದಿಸಲು ಸಿಬ್ಬಂದಿ ಸತತ 8 ಗಂಟೆಗಳ ಕಾಲ ಹರಸಾಹಸ ಪಟ್ಟು, ಕೊನೆಗೂ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !