July 28, 2026
Tuesday, July 28, 2026
spot_img

ಪ್ರೌಢಶಾಲೆ ತಲುಪುವಷ್ಟರಲ್ಲಿ ಕಮರುತ್ತಿದೆಯೇ ಹೆಣ್ಣುಮಕ್ಕಳ ಶಿಕ್ಷಣ? ಆತಂಕ ಮೂಡಿಸುತ್ತಿದೆ ಹೊಸ ಅಂಕಿ-ಅಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್;

ಕಳೆದ ಮೂರು ವರ್ಷಗಳಿಂದ ನಿರಂತರ ಇಳಿಕೆ ಕಂಡುಬರುತ್ತಿದ್ದರೂ, ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಶಾಲಾ ಡ್ರಾಪ್‌ಔಟ್‌ (ಶಾಲೆ ಬಿಡುವ) ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳಲ್ಲೇ ಅತ್ಯಧಿಕ ದರವನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ‘ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್’ (UDISE+) ದತ್ತಾಂಶದಿಂದ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ.

ರಾಷ್ಟ್ರೀಯ ಸರಾಸರಿಗಿಂತಲೂ ಭಾರಿ ಹೆಚ್ಚಳ:

ವರದಿಯ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದ ಬಾಲಕಿಯರ ಡ್ರಾಪ್‌ಔಟ್‌ ಪ್ರಮಾಣವು ಶೇಕಡಾ 13.9 ರಷ್ಟಿದೆ. ಇದು ದೇಶದ ಒಟ್ಟಾರೆ ರಾಷ್ಟ್ರೀಯ ಬಾಲಕಿಯರ ಸರಾಸರಿಗಿಂತ (ಶೇ. 8) ಗಮನಾರ್ಹವಾಗಿ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಯು ಕಳೆದ ಮೂರು ವರ್ಷಗಳಲ್ಲಿ ಶೇ. 12.6 ರಿಂದ ಶೇ. 8 ಕ್ಕೆ ವೇಗವಾಗಿ ಕುಸಿದಿದೆ. ಆದರೆ ಕರ್ನಾಟಕದ ಸುಧಾರಣೆಯ ವೇಗವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ನಿಧಾನಗತಿಯಲ್ಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಶೇ. 15.6 ರಷ್ಟು ಡ್ರಾಪ್‌ಔಟ್‌ ದರದೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಕಳೆದ 3 ವರ್ಷಗಳಲ್ಲಿ ಕರ್ನಾಟಕದ ಸ್ಥಿತಿ:

ರಾಜ್ಯದಲ್ಲಿ ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆಯಾದರೂ ಕಳಪೆ ಸ್ಥಾನದಲ್ಲೇ ಮುಂದುವರಿದಿದೆ. ಕಳೆದ 3 ವರ್ಷಗಳ ಅಂಕಿ ಅಂಶ ನೋಡುವುದಾದರೆ 2023–24: ಶೇ. 19.6, 2024-25: ಶೇ. 14.6, 2025-26: ಶೇ. 13.9 ರಷ್ಟಿದೆ.

ಬಿಹಾರ, ಉತ್ತರ ಪ್ರದೇಶದ ಭಾರಿ ಸುಧಾರಣೆ:

ಹಿಂದೆ ಭಾರಿ ಪ್ರಮಾಣದ ಡ್ರಾಪ್‌ಔಟ್‌ ಹೊಂದಿದ್ದ ಬಿಹಾರ ರಾಜ್ಯವು 2023-24ರಲ್ಲಿದ್ದ ಶೇ. 25.1 ರಿಂದ ಪ್ರಸ್ತುತ ಶೇ. 9.1 ಕ್ಕೆ ತಗ್ಗಿಸುವ ಮೂಲಕ ಅದ್ಭುತ ಸುಧಾರಣೆ ಕಂಡಿದೆ. ಉತ್ತರ ಪ್ರದೇಶವು ಶೇ. 7.3 ರಷ್ಟು ಕಡಿಮೆ ಡ್ರಾಪ್‌ಔಟ್‌ ದರವನ್ನು ಕಾಯ್ದುಕೊಂಡಿದೆ. ದೊಡ್ಡ ರಾಜ್ಯಗಳ ಪೈಕಿ ಅಸ್ಸಾಂ (ಶೇ. 13.9) ಕರ್ನಾಟಕಕ್ಕೆ ಸಮನಾದ ಸ್ಥಾನದಲ್ಲಿದ್ದರೆ, ಗುಜರಾತ್ (ಶೇ. 13.3) ನಂತರದ ಸ್ಥಾನದಲ್ಲಿದೆ.

ಇದನ್ನೂ ಓದಿ:

ದಕ್ಷಿಣದ ಇತರ ರಾಜ್ಯಗಳು ಮಾದರಿ:

ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣದ ಇತರ ರಾಜ್ಯಗಳು ಬಾಲಕಿಯರ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ. ಕೇರಳದಲ್ಲಿ ಕೇವಲ ಶೇ. 3, ತಮಿಳುನಾಡಿನಲ್ಲಿ ಶೇ. 3.2 ಹಾಗೂ ಹರಿಯಾಣದಲ್ಲಿ ಶೇ. 3.8 ರಷ್ಟು ಮಾತ್ರ ಅತ್ಯಂತ ಕಡಿಮೆ ಡ್ರಾಪ್‌ಔಟ್‌ ದರ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !