ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶ್ಯಾಮಲ ನಿಧನ ಹೊಂದಿದ್ದಾರೆ.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಾವಲ ಶ್ಯಾಮಲ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನೂ ಹಲವರು ಆರ್ಥಿಕ ಸಹಾಯ ಸಹ ಮಾಡಿದ್ದರು. ಆದರೆ ಕೊನೆಗೂ ಅವರು ಇಂದು ಬೆಳಿಗ್ಗೆ ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಪಾವಲ ಶಾಮಲ ತಮ್ಮ ಚುರುಕು ನಟನೆ, ಅದ್ಭುತ ಟೈಮಿಂಗ್ನಿಂದಾಗಿ ಚಿತ್ರರಂಗದಲ್ಲಿ ಹೆಸರಾಗಿದ್ದರು. ಅವರು ನಟಿಸಿರುವ ಹಲವು ಹಾಸ್ಯ ದೃಶ್ಯಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅವರ ನಟನೆಯ ದೃಶ್ಯಗಳನ್ನು ಮೀಮ್ಗಳನ್ನಾಗಿ ಸಹ ಬಳಸಿಕೊಳ್ಳಲಾಗುತ್ತದೆ. 2019 ರಲ್ಲಿ ಬಿಡುಗಡೆ ಆದ ‘ಮತ್ತು ವದಲರಾ’ ಅವರ ಕೊನೆಯ ಸಿನಿಮಾ ಆಗಿತ್ತು.



