ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 518 ರಿಂದ 524 ಮೀಟರ್‌ಗೆ ಹೆಚ್ಚಿಸಲು ನಮ್ಮ ಸರ್ಕಾರ ತಯಾರಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರವನ್ನು ನೀಡಲು ಬದ್ಧವಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪ್ಯಾಕೇಜ್ ನೀಡಲಾಗುವುದು. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿಎಂಸಿ ನೀರನ್ನು ಸಂಗ್ರಹಿಸಬಹುದು ಎಂದು ತಿಳಿಸಿದರು.
ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566 ಎಕರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.ಮುಳುಗಡೆ ಹೊಂದಲಿರುವ ಜಮೀನನ್ನು 2 ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ತೀರ್ಮಾನಿಸಲಾಗಿದೆ.