July 28, 2026
Tuesday, July 28, 2026
spot_img

ಜಪಾನ್‌ನಲ್ಲಿ ಭೀಕರ ಭೂಕಂಪ: ಕ್ಯುಶು ಕರಾವಳಿಗೆ ಸುನಾಮಿ ಮುನ್ನೆಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಕ್ಯುಶು ದ್ವೀಪದ ಕುಮಾಮೊಟೊ ಪ್ರದೇಶದಲ್ಲಿ ಮಂಗಳವಾರ ರೇಖಟರ್ ಮಾಪಕದಲ್ಲಿ 7.1 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಪ್ರಕೃತಿ ವಿಕೋಪದ ರಭಸಕ್ಕೆ ಹಲವು ಕಟ್ಟಡಗಳು ನೆಲಸಮಗೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಮಂತ್ರಿ ಸನೇ ತಕೈಚಿ ದೃಢಪಡಿಸಿದ್ದಾರೆ.

1 ಮೀಟರ್ ಸುನಾಮಿ ಅಲೆಗಳ ಮುನ್ನೆಚ್ಚರಿಕೆ

ಭೂಮಿಯ ಆಳದಲ್ಲಿ 10 ಕಿಲೋಮೀಟರ್ ಕೇಂದ್ರಬಿಂದು ಹೊಂದಿದ್ದ ಈ ಭೂಕಂಪದಿಂದಾಗಿ ಕರಾವಳಿ ತೀರದಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಪಾನ್ ಹವಾಮಾನ ಸಂಸ್ಥೆಯು (JMA) ಕರಾವಳಿ ಜನರಿಗೆ ತಕ್ಷಣವೇ ಸುರಕ್ಷಿತ ಹಾಗೂ ಎತ್ತರದ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ. ನಾಗಸಾಕಿ, ಫುಕುವೋಕಾ, ಕಾಗೋಶಿಮಾ ಸೇರಿದಂತೆ ಕ್ಯುಶು ದ್ವೀಪದ ಪ್ರಮುಖ ಭಾಗಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಅಣು ಸ್ಥಾವರಗಳು ಸುರಕ್ಷಿತ, ಜೀವ ರಕ್ಷಣೆಗೆ ಆದೇಶ

ಈ ದುರಂತದ ನಡುವೆಯೂ ದೇಶದ ಪರಮಾಣು ವಿದ್ಯುತ್ ಕೇಂದ್ರಗಳಲ್ಲಿ ಯಾವುದೇ ಅಪಾಯಕಾರಿ ಘಟನೆಗಳು ನಡೆದಿಲ್ಲ ಎಂದು ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಸಂಕಷ್ಟದಲ್ಲಿರುವ ಜನರ ಜೀವ ರಕ್ಷಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ತಕ್ಷಣವೇ ಪರಿಹಾರ ಮತ್ತು ತುರ್ತು ಕಾರ್ಯಾಚರಣೆ ತೀವ್ರಗೊಳಿಸಲು ಪ್ರಧಾನಿ ಕಚೇರಿ ಅಧಿಕಾರಿಗಳಿಗೆ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !