ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಯುವತಿ ಲಾವಣ್ಯ ಗೌಡಳನ್ನು ಪೈಶಾಚಿಕವಾಗಿ ಹತ್ಯಗೈದ ಪ್ರಕರಣದ ಆರೋಪಿ ಚೇತನ್ ನನ್ನು ಘಟನೆ ನಡೆದ 11 ದಿನಗಳ ಬಳಿಕ ಅಧಿಕೃತವಾಗಿ ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಸೋಮವಾರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗೊಳಿಸಿದ ಬಳಿಕ ಅಧಿಕೃತವಾಗಿ ಅತನ ಬಂಧನ ಕಾರ್ಯದ ಪ್ರಕ್ರಿಯೆ ನಡೆಸಿದ ಪೊಲೀಸರು ಮಂಗಳವಾರ ಬಂಟ್ವಾಳ ನ್ಯಾಯಾಲಯದ ಮುಂದೆ ಹಂತಕ ಚೇತನ್ ನನ್ನು ಹಾಜರುಪಡಿಸಿದ್ದರು. ಮುಂದಿನ ವಿಚಾರಣೆ ಮತ್ತು ಆರೋಪಿಯ ಸಮ್ಮುಖದಲ್ಲಿ ಸ್ಥಳ ಮಹಜರು ಸಹಿತ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ನ್ಯಾಯಾಲಯದ ಮುಂದೆ ಪೊಲೀಸರ ನಿವೇದನೆಯನ್ನು ಪುರಸ್ಕರಿಸಿದ ನ್ಯಾಯಾಲಯ ಜು.31 ರವರೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಜುಲೈ 16 ರಂದು ಸಂಜೆ 5.45 ರಹೊತ್ತಿಗೆ ಮನೆಗೆ ತೆರಳಲೆಂದು ಬಿ.ಸಿ. ರೋಡ್ ಬಸ್ ನಿಲ್ದಾಣಕ್ಕೆ ಬಂದಿದ್ದ ಕಕ್ಕೆಪದವಿನ ಅಮಾಯಕ ಯುವತಿ ಲಾವಣ್ಯಳನ್ನು ಹೊಂಚು ಹಾಕಿ ಕುಳಿತಿದ್ದ ಗೇರುಕಟ್ಟೆಯ ಚೇತನ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ರಾಜಾರೋಷವಾಗಿ ಕಾರಿನಲ್ಲಿ ಪರಾರಿಯಾಗಿದ್ದ. ಘಟನೆ ನಡೆದ ಮರುದಿನ ಮಂಗಳೂರಿನ ಪಚ್ಚನಾಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ತಾನು ಇಲಿಪಾಷಣ ಪದಾರ್ಥ ಸೇವಿಸಿದ್ದಾಗಿ ತಿಳಿಸಿದ್ದ, ತಕ್ಷಣ ಅತನಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು. ಬಳಿಕ ಚೇತರಿಸಿಕೊಂಡಿದ್ದ ಈತನನ್ನು ಎರಡು ದಿನಗಳ ಹಿಂದೆ ತುರ್ತು ನಿಗಾ ಘಟಕದಿಂದ ವಾಡ್೯ ಗೆ ಶಿಷ್ಟ್ ಮಾಡಲಾಗಿತ್ತು. ಅಲ್ಲಿ ಈತನಿಗೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸೋಮವಾರ ಈತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸ್ ಠಾಣೆಗೆ ಕರೆತಂದು ಅಧಿಕೃತವಾಗಿ ಬಂಧಿಸಲಾಗಿದೆ.



