ಹೊಸದಿಗಂತ ವರದಿ ಮಂಡ್ಯ:
ಮಂಡ್ಯ: ಸಾಲಬಾದೆ ತಾಳಲಾರದೆ ಆಲದ ಮರಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೀಸೆ ಪುಟ್ಟಸ್ವಾಮಿ (58) ಹಾಗೂ ನಾಗಮ್ಮ (55) ಎಂಬುವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ.
ಗ್ರಾಮದಲ್ಲಿ ಸುಮಾರು 5 ಎಕರೆ ಜಮೀನು ಹೊಂದಿದ್ದ ಪುಟ್ಟಸ್ವಾಮಿ, ನಾಗಮ್ಮ ದಂಪತಿ ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದರು. ಸಾಲ ಮಾಡಿಕೊಂಡಿದ್ದ ಪುಟ್ಟಸ್ವಾಮಿ ಅವರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು ಎನ್ನಲಾಗಿದೆ. ಜೊತೆಗೆ ಮಳೆ ಬಾರದೆ ಬೆಳೆಯೂ ಇಲ್ಲದೆ ಪರಿತಪಿಸುವಂತಾಗಿತ್ತು. ಇದರಿಂದ ಬೇಸತ್ತು ಗ್ರಾಮದ ತಮ್ಮ ಜಮೀನಿನ ಪಕ್ಕದ ದೊಡ್ಡಲಿಂಗಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ದೊಡ್ಡ ಆಲದ ಮರಕ್ಕೆ ಇಬ್ಬರೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದರು.
ಇದನ್ನೂ ಓದಿ:
ಸ್ಥಳಕ್ಕೆ ಪಿಎಸ್ಐ ರಂಗಪ್ಪ ಸಾಲಾಪುರ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



