ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಬಾಲಿವುಡ್ ನಟ ಸುದೇಶ್ ಬೇರಿ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ನೀಡಿದ ವೈರಲ್ ಹೇಳಿಕೆಯೊಂದು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ‘ಅಕಂಪನಿ ಅಕ್ಕಿ’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿಯವರನ್ನು ಸಾಕ್ಷಾತ್ ‘ವಿಷ್ಣುವಿನ ಅವತಾರ’ ಎಂದು ಬಣ್ಣಿಸಿದ್ದಾರೆ. ಸಿಕ್ಕ ಅವಕಾಶದಲ್ಲಿ ಅವರ ಚರಣಗಳನ್ನು ತೊಳೆದು, ಆ ತೀರ್ಥವನ್ನು ಸ್ವೀಕರಿಸಲು ತಾನು ಸಿದ್ಧನಿದ್ದೇನೆ ಎಂದು ತಮ್ಮ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರಿಗೆ ಸುದೇಶ್ ಬೇರಿ ಖಡಕ್ ಟಾಂಗ್
ಇದೇ ವೇಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ವಿವಿಧ ಸಂಘಟನೆಗಳು ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ಸುದೇಶ್ ಬೇರಿ ತೀವ್ರ ಕಿಡಿಕಾರಿದ್ದಾರೆ. ಇಂತಹ ಅನಗತ್ಯ ಒಕ್ಕೂಟಗಳ ಬಗ್ಗೆ ತಮಗೆ ಯಾವುದೇ ಅರಿವಿಲ್ಲ ಎಂದ ಅವರು, ಇಂತಹ ಚಟುವಟಿಕೆಗಳು ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುವ ಬದಲಿಗೆ ಹಿನ್ನಡೆಗೆ ತಳ್ಳುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುವಜನತೆಗೆ ನೀಡಿದರು ಉಪಯುಕ್ತ ಸಲಹೆ
ಪ್ರತಿಭಟನೆಯಲ್ಲಿ ಸಮಯ ವ್ಯರ್ಥ ಮಾಡುವ ಯುವಕರಿಗೆ ಕಿವಿಮಾತು ಹೇಳಿದ ನಟ, “ರಸ್ತೆಯಲ್ಲಿ ಕುಳಿತು ಕಾಲ ಕಳೆಯುವ ಬದಲು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿ. ಮಕ್ಕಳಿಗೆ ಆಟದ ಮೈದಾನ, ಹಿರಿಯರಿಗೆ ಆಶ್ರಮಗಳನ್ನು ಕಟ್ಟಿ ಮತ್ತು ಬಡವರ ಆರೋಗ್ಯ ಸೇವೆಗೆ ನೆರವಾಗಿ. ಧರಣಿಗಳಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ” ಎಂದು ನೇರವಾಗಿ ಟೀಕಿಸಿದ್ದಾರೆ.



