ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಗಂಟೆಗೆ ಸರಾಸರಿ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಆದರೆ ಈ ಗಾಳಿಯಲ್ಲಿ ತೇವಾಂಶದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ.
ಉತ್ತರ ಒಳನಾಡು ಕರ್ನಾಟಕದಲ್ಲಿ ಗಾಳಿಯ ವೇಗ 50-60 ಕಿ.ಮೀ., ದಕ್ಷಿಣ ಒಳನಾಡು ಕರ್ನಾಟಕದಲ್ಲಿ 40-50 ಕಿ.ಮೀ. ಹಾಗೂ ಕರಾವಳಿ ಕರ್ನಾಟಕದಲ್ಲಿ ಸುಮಾರು 40 ಕಿ.ಮೀ. ವೇಗದಲ್ಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆಯ ಮುನ್ಸೂಚನೆ ಇಲ್ಲ.
ಜೂನ್ ಮತ್ತು ಜುಲೈ ತಿಂಗಳಲ್ಲಿ ನೈಋತ್ಯ ಮುಂಗಾರು ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.10, ಕರಾವಳಿ ಕರ್ನಾಟಕದಲ್ಲಿ ಶೇ.28 ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.36ರಷ್ಟು ಮಳೆ ಕೊರತೆಯಾಗಿದೆ.
ಮಳೆ ಸುರಿಯಲು ಅಗತ್ಯವಾದ ಟ್ರಫ್ (ಕಡಿಮೆ ಒತ್ತಡದ ಉದ್ದ ವಲಯ), ಗಾಳಿಯ ಸಂಗಮ ಅಥವಾ ಇತರ ಅನುಕೂಲಕರ ಸಿನಾಪ್ಟಿಕ್ (ವಿಶಾಲ ಪ್ರಮಾಣದ ವಾತಾವರಣೀಯ) ಪರಿಸ್ಥಿತಿಗಳು ಇಲ್ಲ. ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ ಮಳೆಯಾಗಲು ಗಾಳಿಯಲ್ಲಿ 55-60 ಮಿ.ಮೀ. ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸುಮಾರು 50 ಮಿ.ಮೀ. ನೀರಿನ ಸಮನಾದ ತೇವಾಂಶ ಇರಬೇಕು. ಆದರೆ ಕರ್ನಾಟಕದಲ್ಲಿ ಈಗ ಅದು 40 ಮಿ.ಮೀ.ಗಿಂತಲೂ ಕಡಿಮೆಯಿದೆ.
ಪ್ರಸ್ತುತ ವಾತಾವರಣ ಆಹ್ಲಾದಕರವಾಗಿದ್ದರೂ, ಈ ಋತುವಿನಲ್ಲಿ ಈಗಾಗಲೇ ದುರ್ಬಲವಾಗಿರುವ ಮುಂಗಾರನ್ನು ಚೇತರಿಸಿಕೊಳ್ಳಲು ಇದು ಸಹಕಾರಿಯಾಗುತ್ತಿಲ್ಲ. ಎಲ್ ನಿನೊ ಪರಿಣಾಮದಿಂದಾಗಿ ಈ ವರ್ಷ ಮುಂಗಾರು ದುರ್ಬಲವಾಗಲಿದೆ ಎಂಬ ಮುನ್ಸೂಚನೆಯನ್ನು ಈಗಿನ ಪರಿಸ್ಥಿತಿ ಸಮರ್ಥಿಸುತ್ತಿದೆ.



