ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾಗೂ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸುರಕ್ಷತಾ ದೃಷ್ಟಿಯಿಂದ ನದಿಯತ್ತ ತೆರಳಬೇಡಿ ಎಂದು ದೇವಸ್ಥಾನ ಆಡಳಿತ ಭಕ್ತರಿಗೆ ಸೂಚನೆ ನೀಡಿದೆ.
ಸ್ನಾನಘಟ್ಟವನ್ನು ಬಳಸಲು ಸಾಧ್ಯವಾಗದ ಕಾರಣ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸ್ನಾನಕ್ಕಾಗಿ ದೊಡ್ಡ ಡ್ರಮ್ಗಳನ್ನು ಇಟ್ಟು ನೀರು ತುಂಬಿಸಲಾಗಿದೆ. ಹೀಗಾಗಿ ದೇವರ ದರುಶನಕ್ಕೆ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ.
ನದಿಯಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ಪೊಲೀಸರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ಭಕ್ತರು ನದಿಗೆ ಇಳಿಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿಯ ನೀರಿನ ಮಟ್ಟದ ಮೇಲೆ ಆಡಳಿತ ನಿರಂತರ ನಿಗಾ ಇರಿಸಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಪರ್ಯಾಯ ಸ್ನಾನ ವ್ಯವಸ್ಥೆ ಮುಂದುವರಿಯಲಿದೆ.



