October 15, 2026
Thursday, October 15, 2026
spot_img

ದೆಹಲಿ ಜಂತರ್ ಮಂತರ್‌ನಲ್ಲಿ ಧಗಧಗಿಸಬೇಕಿತ್ತೇ ಹಿಂಸಾಚಾರ? JeM ಶಂಕಿತ ಉಗ್ರನ ಬೃಹತ್ ಸಂಚು ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ನಡೆದ ‘ನೀಟ್’ ಪರೀಕ್ಷಾ ಅಕ್ರಮ ವಿರೋಧಿ ವಿದ್ಯಾರ್ಥಿ ಚಳವಳಿಯನ್ನೇ ಬಂಡವಾಳ ಮಾಡಿಕೊಂಡು ದೊಡ್ಡ ಮಟ್ಟದ ಧ್ವಂಸಕ ಕೃತ್ಯ ಎಸಗಲು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆ ಯೋಜನೆ ರೂಪಿಸಿತ್ತು. ಈ ಕುರಿತು ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಬರ್ಧಮಾನ್‌ನಲ್ಲಿ ಶಂಕಿತ ಭಯೋತ್ಪಾದಕ ಮೊಹಮ್ಮದ್ ಹಮೀಮ್ ಮೊಂಡಲ್‌ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.

ಪೋಲಿಸ್ ಸಮವಸ್ತ್ರ ಧರಿಸಿ ಧರಣಿ ಸ್ಥಳಕ್ಕೆ ಎಂಟ್ರಿ

ಪ್ರತಿಭಟನೆಯ ಕಾವು ಹೆಚ್ಚಿದ್ದಾಗ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಲು ಈತ ಪೋಲಿಸ್ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳ ಗುಂಪನ್ನು ಸೇರಲು ತೀರ್ಮಾನಿಸಿದ್ದ. ನಾಯಕರ ಮೇಲೆ ದಾಳಿ ನಡೆಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಈತನ ಮುಖ್ಯ ಉದ್ದೇಶವಾಗಿತ್ತು ಎಂದು STF ಅಧಿಕೃತ ಮೂಲಗಳು ತಿಳಿಸಿವೆ.

ಹನಿಟ್ರ್ಯಾಪ್ ಮತ್ತು ರಾಜಕಾರಣಿಗಳ ಕಿಡ್ನ್ಯಾಪ್ ಪ್ಲಾನ್

ಬಂಧಿತ ಮೊಂಡಲ್ ಕೇವಲ ಬಾಂಬ್ ದಾಳಿಗೆ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡಿದ್ದ. ಜಾರ್ಖಂಡ್‌ನಲ್ಲಿ ಬಂಧಿತಳಾದ ಅರ್ಪಿತಾ ಸರ್ಕಾರ್ ಎಂಬಾಕೆಯ ನೆರವಿನಿಂದ ಹೌರಾದ ಪ್ರಭಾವಿ ರಾಜಕಾರಣಿಯ ಮಗನನ್ನು ಹನಿಟ್ರ್ಯಾಪ್ ಮಾಡಿ, ಭಾರಿ ಹಣ ಸುಲಿಗೆ ಮಾಡಲು ಸಂಚು ಹೂಡಿದ್ದ.

ಪಾಕಿಸ್ತಾನದ ISI ಮತ್ತು ಎನ್‌ಕ್ರಿಪ್ಟೆಡ್ ಚಾಟ್‌ಗಳು

ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಬಳಸಿ ಹ್ಯಾಂಡ್ಲರ್‌ಗಳ ಸಂಪರ್ಕ ಪಡೆದ ಈತ, ಬಳಿಕ ವಾಟ್ಸಾಪ್ ಹಾಗೂ ಟೆಲಿಗ್ರಾಮ್‌ಗಳ ಮೂಲಕ ರಹಸ್ಯ ಮಾತುಕತೆ ನಡೆಸುತ್ತಿದ್ದ. ಈತನ ಫೋನ್ ಪರಿಶೀಲಿಸಿದಾಗ ಪಾಕಿಸ್ತಾನದ ISI ಏಜೆಂಟರು ಮತ್ತು ಶಹಜಾದ್ ಭಟ್ಟಿ ಗ್ಯಾಂಗ್‌ನ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು ಸಾಬೀತಾಗಿದೆ.

Must Read