ಹೊಸದಿಗಂತ ವರದಿ ಚಿತ್ರದುರ್ಗ:
ಸತತವಾಗಿ ಮೂರನೇ ಬಾರಿಗೆ ಚಳ್ಳಕೆರೆ ಶಾಸಕರಾಗಿ ಆಯ್ಕೆಯಾಗಿರುವ ಅಭಿವೃದ್ದಿಯ ಹರಿಕಾರ ಟಿ.ರಘುಮೂರ್ತಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಟಿ.ರಘುಮೂರ್ತಿ ಯುವ ಸೇನೆ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ ಕಾಂಗ್ರೆಸ್ ಕಚೇರಿ ಎದುರು ಸಿಹಿ ಹಂಚಿ ಸಂಭ್ರಮಿಸಲಾಯಿತು.
ನಿಷ್ಠೆಗೆ ಸಿಕ್ಕ ಗೌರವ
ಟಿ.ರಘುಮೂರ್ತಿ ಯುವ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಟಿ.ರಘುಮೂರ್ತಿವರ ಅಭಿವೃದ್ದಿ ದೃಷ್ಟಿ ಹಾಗೂ ಪಕ್ಷದ ಮೇಲಿಟ್ಟಿರುವ ನಿಷ್ಠೆಯನ್ನು ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಿರುವುದು ನಮಗೆಲ್ಲಾ ಹೆಮ್ಮೆಯೆನಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಬರೆದ ಪತ್ರವನ್ನು ಅರ್ಪಿಸಿ ಒತ್ತಾಯಿಸಿದ್ದೆವು. ನಮ್ಮ ಬೇಡಿಕೆ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯ ಅಭಿವೃದ್ಧಿಗೆ ಹೊಸ ನಿರೀಕ್ಷೆ
ಟಿ.ರಘುಮೂರ್ತಿ ಸಚಿವರಾಗಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯತ್ತದೆಂಬ ಭರವಸೆಯಿದೆ. ಅದೇ ರೀತಿ ಚಿತ್ರದುರ್ಗದಲ್ಲಿ ಇಂಜಿನಿಯರಿಂಗ್ ಕಾಲೇಜು ಆಗಬೇಕು. ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣವಾಗಲಿ ಎಂದು ನೂತನ ಸಚಿವರಿಗೆ ಕೆ.ಟಿ.ಶಿವಕುಮಾರ್ ಶುಭ ಹಾರೈಸಿದರು.
ಕಾಂಗ್ರೆಸ್ನ ಮಧು ಪಾಲೇಗೌಡ, ಸುರೇಶ್ ಈಚಲನಾಗೇನಹಳ್ಳಿ ಹಾಗೂ ಟಿ.ರಘುಮೂರ್ತಿ ಯುವ ಸೇನೆಯ ಪದಾಧಿಕಾರಿಗಳಾದ ಚಳ್ಳಕೆರೆ ಪಾಂಡು, ಎನ್.ಎಸ್.ತಿಪ್ಪೇಸ್ವಾಮಿ, ವಿಠಲ, ಶಿವಕುಮಾರ್, ಕೆಂಚವೀರಪ್ಪ, ರಾಕೇಶ್ ಇವರುಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.



