August 4, 2026
Tuesday, August 4, 2026
spot_img

ಸಚಿವ ಸ್ಥಾನ ಸಿಗದ ಬೇಸರ: ‘ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಂಗ್ರೆಸ್ ದ್ರೋಹ ಮಾಡಿದೆ’ ಎಂದ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ಅನ್ಯಾಯ ಎಂದು ಅವರು ಆರೋಪಿಸಿದರು.

‘ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು’

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸ್ಥಳೀಯ ಶಾಸಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆದರೆ ಸಚಿವ ಸಂಪುಟ ರಚನೆ ವೇಳೆ ಈ ಎರಡೂ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಗೆಲ್ಲಿಸಿದ್ದು ನಮ್ಮ ವರ್ಚಸ್ಸು’

ತಾವು ಮತ್ತು ಇತರ ಶಾಸಕರು ಕೇವಲ ಪಕ್ಷದ ಹೆಸರಿನಲ್ಲಿ ಅಲ್ಲ, ತಮ್ಮ ವೈಯಕ್ತಿಕ ಜನಬೆಂಬಲ ಮತ್ತು ವರ್ಚಸ್ಸಿನ ಆಧಾರದ ಮೇಲೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಹೇಳಿದರು. ಬಂಗಾರಪೇಟೆಗೆ ತಾವು ಬರುವ ಮೊದಲು ಕಾಂಗ್ರೆಸ್ ಪಕ್ಷ ದುರ್ಬಲ ಸ್ಥಿತಿಯಲ್ಲಿತ್ತು. ಪಕ್ಷವನ್ನು ಸಂಘಟಿಸಿ ಗೆಲುವಿನ ಹಾದಿಗೆ ತಂದಿದ್ದೇವೆ. 2028ರ ಚುನಾವಣೆಯಲ್ಲಿ ಇನ್ನಷ್ಟು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

‘ಕಾರ್ಯಕರ್ತರಿಗೆ ಉತ್ತರ ನೀಡುವುದು ಕಷ್ಟ’

ರಾಜ್ಯದ ಕೆಲವು ಜಿಲ್ಲೆಗಳಿಗೆ ಎರಡು ಅಥವಾ ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಆದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಚಿವ ಸ್ಥಾನಕ್ಕೆ ಅರ್ಹ ನಾಯಕರು ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯ ಅಭಿವೃದ್ಧಿಗೆ ಸಚಿವ ಸ್ಥಾನ ಅತ್ಯಗತ್ಯವಾಗಿತ್ತು. ಈಗ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.

ಇದನ್ನೂ ಓದಿ:

ಹೈಕಮಾಂಡ್ ಭೇಟಿ ನಿರ್ಧಾರ

ಈ ವಿಚಾರವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರಲು ಶೀಘ್ರದಲ್ಲೇ ಹಿರಿಯ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲೆಯ ಹಿರಿಯ ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಕುರಿತು ಒಟ್ಟಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅಸಮಾಧಾನ ಹೆಚ್ಚಿಸಿದ ಸಚಿವ ಸಂಪುಟ ವಿಸ್ತರಣೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನ ಹಲವು ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದು ಇದೀಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಪಕ್ಷದ ಹೈಕಮಾಂಡ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !