ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಸೋಮವಾರದಂದು ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಮೆಸ್ಕಾಂ ಶಾಖೆಯ ಲೈನ್ ಮೆನ್ ಶೇಖ್ ಜಮೀರ್ ಅವರ ಮನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸರಕಾರ ಮತ್ತು ಮೆಸ್ಕಾಂ ಇಲಾಖೆಯಿಂದ ಸಿಗುವ ವಿಮೆ ಹಾಗೂ ಪರಿಹಾರದ ಆದೇಶ ಪತ್ರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಕಳೆದ ಸೋಮವಾರ ಬೆಳಿಗ್ಗೆ ಉಚ್ಚಿಲ ನಯಾಪಟ್ಣದ ಟ್ರಾನ್ಸ್ ಪಾರ್ಮರ್ ನ ದುರಸ್ಥಿಯ ವೇಳೆ ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಜಮೀರ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು.

ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾರೋಡ್ ಪಿಲಾರುವಿನ ಮೃತ ಶೇಖ್ ಜಮೀರ್ ಅವರ ಮನೆಗೆ ಭೇಟಿ ನೀಡಿದ ಸಚಿವ ಖಾದರ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು ಸರಕಾರ ಹಾಗೂ ಮೆಸ್ಕಾಂನಿಂದ ಸಿಗಬೇಕಾದ 1 ಕೋಟಿ 32 ಲಕ್ಷ ರೂ. ಪರಿಹಾರ, ತಿಂಗಳ ಪೆನ್ಷನ್, ಮಡದಿ ಅಥವಾ ಮಗಳಿಗೆ ಉದ್ಯೋಗ ಭದ್ರತೆ ಸೇರಿದಂತೆ ಏನೆಲ್ಲಾ ಸವಲತ್ತುಗಳು ಸಿಗಲಿವೆಯೋ ಅದನ್ನ ಮೃತರ ಕುಟುಂಬಸ್ಥರ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಜಮೀರ್ ಅವರ ಅಕಾಲಿಕ ಅಗಲಿಕೆಯು ಮೆಸ್ಕಾಂ ಇಲಾಖೆ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ನಾವು ಎಷ್ಟೇ ಸಂತಾಪ ಪರಿಹಾರ ನೀಡಿದರೂ ಸಹ ಜಮೀರ್‌ನನ್ನು ಕಳೆದುಕೊಂಡ ದು:ಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ದೇವರೇ ಸಂತ್ರಸ್ತ ಕುಟುಂಬಕ್ಕೆ ಕರುಣಿಸಬೇಕು ಎಂದರು.
ಇದನ್ನೂ ಓದಿ:
ಈ ವೇಳೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದಯಾನಂದ್, ಸೋಮೇಶ್ವರ ಶಾಖೆ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ಮಂಗಳೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಮೊದಲಾದವರು ಉಪಸ್ಥಿತರಿದ್ದರು.



