ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾ ತಾಲೂಕಿನಲ್ಲಿ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿರುವ ಖಾಸಗಿ ವಾಹನಗಳ ಓಡಾಟ ನಡೆಯುತ್ತಿದ್ದು ಇವುಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕರ್ತವ್ಯದ ಮೇಲಿರುವ ವಾಹನಗಳೇ? ಎನ್ನುವ ಕುರಿತಂತೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಅಂಕೋಲಾ ಮಾರುಕಟ್ಟೆಯಲ್ಲಿ ಬೆಳಗಾವಿ ನೋಂದಣಿ ಸಂಖ್ಯೆಯ ಖಾಸಗಿ ಕಾರೊಂದರ ಹಿಂಬದಿಯ ಗ್ಲಾಸ್ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿರುವುದು ಕಂಡು ಬಂದಿದ್ದು, ಈ ವಾಹನದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸದ ಕರ್ತವ್ಯದ ಮೇಲೆ ಓಡಾಡುತ್ತಿರುವುದೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತಾಗಿದೆ.
ಕೆಲವು ದಿನಗಳ ಹಿಂದೆ ಅಂಕೋಲಾದಿಂದ ಗಂಗಾವಳಿ ಮಾರ್ಗವಾಗಿ ಗೋಕರ್ಣದ ಕಡೆ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿರುವ ತೆಲಂಗಾಣ ನೋಂದಣಿ ಸಂಖ್ಯೆಯ ಕಪ್ಪುಬಣ್ಣದ ಕಾರೊಂದು ತೆರಳಿದ್ದು, ಅದರಲ್ಲಿ ಇದ್ದವರು ಗಡ್ಡಧಾರಿಗಳಾಗಿದ್ದು ಪೊಲೀಸರಂತೆ ಕಾಣುತ್ತಿರಲಿಲ್ಲ ಎಂಬ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಇದನ್ನೂ ಓದಿ:
ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ತಮ್ಮ ಖಾಸಗಿ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಬಾರದು ಇದಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ. ಸರ್ಕಾರಿ ಇಲಾಖೆಗಳಿಗೆ ಸಂಬಂಧವೇ ಇಲ್ಲದವರೂ ಇತ್ತೀಚೆಗೆ ತಮ್ಮ ವಾಹನಗಳ ಮೇಲೆ ಪೊಲೀಸ್, ಕರ್ನಾಟಕ ಸರ್ಕಾರ, ಆರ್ಮಿ ಮೊದಲಾದ ಸ್ಟಿಕ್ಕರ್ಗಳನ್ನು ಅಂಟಿಸಿಕೊಂಡು ಓಡಾಡುತ್ತಿರುವುದು ಹೆಚ್ಚುತ್ತಿದ್ದು, ಇಂತಹ ಖಾಸಗಿ ವಾಹನಗಳ ಕುರಿತಂತೆ ವಿಚಾರಣೆ ನಡೆಸುವ ಅಗತ್ಯತೆ ಇದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.



