Friday, September 12, 2025

ಮದ್ದೂರು ಪ್ರಕರಣ: ತಪ್ಪೇ ಮಾಡದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ದೂರು ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಪ್ರಕರಣದ ಹೊಣೆಗಾರಿಕೆಯನ್ನು ಹೊರಿಸದಿದ್ದರೂ, ಅಡಿಷನಲ್ ಎಸ್ಪಿ ತಿಮ್ಮಯ್ಯ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಬಲಿಪಶು ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಗೃಹ ಇಲಾಖೆ ತಿಮ್ಮಯ್ಯರ ವರ್ಗಾವಣೆಗೆ ಆದೇಶ ಹೊರಡಿಸಿದರೂ, ಅವರನ್ನು ಯಾವ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮದ್ದೂರು ಘಟನೆಯಲ್ಲಿ ತಿಮ್ಮಯ್ಯರಿಗೆ ಯಾವುದೇ ಹೆಚ್ಚುವರಿ ಜವಾಬ್ದಾರಿ ನೀಡಿರಲಿಲ್ಲ. ಬಂದೋಬಸ್ತ್ ನೇತೃತ್ವ ವಹಿಸಿದ್ದವರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ. ಕಲ್ಲು ತೂರಾಟವನ್ನು ತಡೆಯುವ ಜವಾಬ್ದಾರಿ ಸ್ಥಳೀಯ ಇನ್‌ಸ್ಪೆಕ್ಟರ್ ಮತ್ತು ಕರ್ತವ್ಯದಲ್ಲಿದ್ದ ಪೊಲೀಸರ ಮೇಲಾಗಿತ್ತು. ಆದರೂ ತಿಮ್ಮಯ್ಯರನ್ನು ವರ್ಗಾವಣೆ ಮಾಡಿರುವುದು ಸರ್ಕಾರದ ನಿರ್ಧಾರದ ವಿರುದ್ಧ ಪ್ರಶ್ನೆ ಎದ್ದಿದೆ.

ಅಡಿಷನಲ್ ಎಸ್.ಪಿ-1 ಹುದ್ದೆಗೆ ನವೀನ್ ಕುಮಾರ್ ಅವರನ್ನು ನೇಮಿಸಿದ್ದು, ಅವರು ಬಳ್ಳಾರಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದರು. ಇದೀಗ ಅವರನ್ನು ಡಿಜಿಐಜಿಪಿ ಕಚೇರಿಗೆ ವರದಿ ಮಾಡಲು ಸೂಚಿಸಲಾಗಿದೆ.

ಈ ಬೆಳವಣಿಗೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಪ್ಪೇ ಮಾಡದ ಅಧಿಕಾರಿಗೆ ಶಿಕ್ಷೆ ನೀಡಿದ ಕ್ರಮವು ನ್ಯಾಯಸಮ್ಮತವಲ್ಲ ಎಂದು ಜನತೆ ವಾಗ್ದಾಳಿ ನಡೆಸುತ್ತಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಮನೋಬಲಕ್ಕೂ ಧಕ್ಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ