Friday, September 12, 2025

ದಸರಾ ಹಬ್ಬಕ್ಕೆ ರಜೆ! ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೊಂದು ವಾರದಲ್ಲಿ ನಾಡಹಬ್ಬ ದಸರಾ ಬರಲಿದೆ. ದಸರಾ ಹಬ್ಬದಲ್ಲಿ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಊರುಗಳಿಗೆ, ಪ್ರವಾಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಹಲವು ಭಾಗಗಳಿಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಿದೆ. ಯಶವಂತಪುರ-ಮಡಗಾಂವ್-ಯಶವಂತಪುರ ಮತ್ತು ಬೆಂಗಳೂರು-ಬೀದರ್-ಬೆಂಗಳೂರಿಗೆ ಒಂದು ಟ್ರಿಪ್​​ನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿವೆ.

ರೈಲು ಸಂಖ್ಯೆ 06249/06250 ಯಶವಂತಪುರ-ಮಡಗಾಂವ್-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (1ಟ್ರಿಪ್) ರೈಲು ಸಂಖ್ಯೆ (06249) ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 30 ರಂದು ಮಧ್ಯಾಹ್ನ 12 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 05:30 ಗಂಟೆಗೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ (06250) ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1 ರಂದು ಬೆಳಿಗ್ಗೆ 06:30 ಗಂಟೆಗೆ ಮಡಗಾಂವ್‌ನಿಂದ ಹೊರಟು, ಅದೇ ದಿನ ರಾತ್ರಿ 11:40 ಗಂಟೆಗೆ ಯಶವಂತಪುರ ತಲುಪಲಿದೆ.

ಈ ರೈಲು 16 ಬೋಗಿಗಳನ್ನು (10 ಸ್ವೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು 2 ಎಸ್ಎಲ್‌ಆರ್/ಡಿ ಬೋಗಿಗಳು) ಒಳಗೊಂಡಿದೆ.

ಈ ರೈಲು ಎರಡು ಮಾರ್ಗಗಳಲ್ಲಿ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರೆತ್ತಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರದಲ್ಲಿ ನಿಲುಗಡೆ ಹೊಂದಲಿದೆ.

ರೈಲು ಸಂಖ್ಯೆ 06291/06292 ಎಸ್‌ಎಂವಿಟಿ ಬೆಂಗಳೂರು-ಬೀದರ್-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ (1 ಟ್ರಿಪ್)

ರೈಲು ಸಂಖ್ಯೆ (06291) ಎಸ್‌ಎಂವಿಟಿ ಬೆಂಗಳೂರು-ಬೀದರ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 30ರಂದು ರಾತ್ರಿ 09:15 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 11:30 ಗಂಟೆಗೆ ಬೀದರ್ ತಲುಪಲಿದೆ. ರೈಲು ಸಂಖ್ಯೆ (06292) ಬೀದರ್-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1ರಂದು ಮಧ್ಯಾಹ್ನ 01 ಗಂಟೆಗೆ ಬೀದರ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 04 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲು 22 ಬೋಗಿಗಳನ್ನು (20 ಸ್ಲಿಪರ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು) ಒಳಗೊಂಡಿರುತ್ತದೆ.

ಈ ರೈಲು ಎರಡು ಮಾರ್ಗಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಮತ್ತು ಹುಮನಾಬಾದ್​​ನಲ್ಲಿ ನಿಲುಗಡೆಗೊಳ್ಳಲಿದೆ.

ಈ ಬಗ್ಗೆ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ, ಹತ್ತಿರದ ರೈಲು ನಿಲ್ದಾಣದ ವಿಚಾರಣಾ ಕೇಂದ್ರಕ್ಕೆ ಭೇಟಿ ನೀಡಬಹುದು, ಅಥವಾ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬಹುದು ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದಾಗಿದೆ.

ಇದನ್ನೂ ಓದಿ